ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿರುವ ಚಿತ್ರ 'ಮಾರಕಾಸ್ತ್ರ'. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮತ್ತು ಹರ್ಷಿಕಾ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ 'ಗ್ಲಾಮರು ಗಾಡಿ' ಹಾಡು ಬಿಡುಗಡೆಯಾಗಿದೆ. ಮಂಜು ಕವಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಹಾಡಿಗೆ ಅನನ್ಯಾ ಭಟ್ ಧ್ವನಿಯಾಗಿದ್ದಾರೆ. ಈ ಹಾಡು ಎ2 ಮ್ಯೂಸಿಕ್ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಮನ ಗೆಲ್ಲುತ್ತಿದೆ. ಹೀನಾ ಎಂ.ಪಂಚಾಲ್ 'ಗ್ಲಾಮರು ಗಾಡಿ' ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ.
ಹಾಡು ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಗುರುಮೂರ್ತಿ ಸುನಾಮಿ, "ಮಾರಕಾಸ್ತ್ರ ನನ್ನ ಮೊದಲ ಚಿತ್ರ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಇದರಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು ಎಲ್ಲರ ಮನ ಗೆದ್ದಿದೆ. ಈ ಸಿನಿಮಾ ಕೂಡ ನಿಮಗೆ ಖಂಡಿತ ಇಷ್ಟವಾಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಗೀತ ನಿರ್ದೇಶಕ ಮಂಜು ಕವಿ ಮಾತನಾಡಿ, "ಚಿತ್ರದಲ್ಲಿ ಏಳು ಹಾಡುಗಳಿವೆ. ಆ ಪೈಕಿ ನಾಲ್ಕು ಹಾಡುಗಳನ್ನು ನಟರಾಜ್ ಅವರೇ ಹಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡನ್ನು ನಾನೇ ಬರೆದಿದ್ದೇನೆ. ಇದಕ್ಕೆ ಅನನ್ಯಾ ಭಟ್ ಧ್ವನಿಯಾಗಿದ್ದಾರೆ" ಎಂದು ತಿಳಿಸಿದರು. ಮುಂಬೈ ಮೂಲದ ವ್ಯಕ್ತಿಯೊಬ್ಬರು ಈ ಚಿತ್ರದ ಹಿಂದಿ ರೈಟ್ಸ್ ಅನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ನೃತ್ಯ ನಿರ್ದೇಶಕ ಹಾಗೂ ಕ್ರಿಯೇಟಿವ್ ಹೆಡ್ ಧನಕುಮಾರ್ ಇದೇ ವೇಳೆ ಮಾಹಿತಿ ನೀಡಿದರು.