ದರ್ಭಾಂಗ(ಬಿಹಾರ): ಫ್ರಾನ್ಸ್‌ನ ಕಾನ್ನಲ್ಲಿ ನಡೆಯುತ್ತಿರುವ 75 ನೇ ಚಲನಚಿತ್ರೋತ್ಸವದಲ್ಲಿ ಮೈಥಿಲಿ ಭಾಷೆಯ ಚಲನಚಿತ್ರ 'ಧುಯಿನ್' ತನ್ನ ಮಿಂಚು ಹರಿಸಲಿದೆ. ಬಿಹಾರ ಸೇರಿದಂತೆ ಮೈಥಿಲಿ ಮಾತನಾಡುವ ಜನರಿಗೆ ಇದು ಹೆಮ್ಮೆಯ ವಿಷಯವಾಗಿದೆ. ಅದೇ ಹೊತ್ತಿಗೆ ಮೈಥಿಲಿ ಚಿತ್ರದ ಆಯ್ಕೆಯಿಂದಾಗಿ ಇಲ್ಲಿನ ಚಿತ್ರರಸಿಕರಲ್ಲಿ ಹುಮ್ಮಸ್ಸು ಸಹ ಮೂಡಿದೆ. ಮೇ 26ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ದೇಶ - ವಿದೇಶಗಳ ಹಲವು ಚಿತ್ರಗಳು ಆಯ್ಕೆಯಾಗಿವೆ.
ಕಾನ್ ಚಲನಚಿತ್ರೋತ್ಸವದಲ್ಲಿ ಭಾರತದ 6 ಸಿನಿಮಾಗಳ ಆಯ್ಕೆ: ಕಾನ್ ಚಲನಚಿತ್ರೋತ್ಸವ 2022 ರಲ್ಲಿ ಭಾರತದಿಂದ ಆರು ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ರಾಕೆಟ್ರಿ - ದಿ ನಂಬಿ ಎಫೆಕ್ಟ್ (ಹಿಂದಿ, ಇಂಗ್ಲಿಷ್, ತಮಿಳು), ಗೋದಾವರಿ (ಮರಾಠಿ), ಆಲ್ಫಾ ಬೇಟಾ ಗಾಮಾ (ಹಿಂದಿ), ಬೂಂಬಾ ರೈಡ್ (ಮಿಶಿಂಗ್), ಧುನ್ (ಮೈಥಿಲಿ) ಮತ್ತು ನಿರಯೆ ತಥಕಲುಲ್ಲಾ ಮರಮ್ (ಮಲಯಾಳಂ) ಭಾಷೆಯ ಚಲನಚಿತ್ರಗಳು ಕಾನ್ಗೆ ಆಯ್ಕೆಗೊಂಡ ಸಿನಿಮಾಗಳಾಗಿವೆ.
ಮೈಥಿಲಿ ಚಿತ್ರದ ಕಥೆ ಏನು?: 'ಧುಯಿನ್ ಮೈಥಿಲಿ ಭಾಷೆಯಲ್ಲಿ ಮಾಡಿದ ಚಿತ್ರವಾಗಿದೆ. ಈ ಚಿತ್ರವನ್ನು ದರ್ಭಾಂಗಾ ನಿವಾಸಿ ಅಚಲ್ ಮಿಶ್ರಾ ನಿರ್ದೇಶಿಸಿದ್ದಾರೆ. ಬಿಹಾರದ ಸಣ್ಣ ಪಟ್ಟಣದಿಂದ ಮುಂಬೈನ ದೊಡ್ಡ ಚಿತ್ರರಂಗದತ್ತ ಸಾಗಲು ಬಯಸುವ ಮಹತ್ವಾಕಾಂಕ್ಷಿ ಕಲಾವಿದನನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ರಂಗಮಂದಿರದ ವೇದಿಕೆಯಿಂದ ಹಿರಿತೆರೆಗೆ ನೇರವಾಗಿ ಜಿಗಿಯಲು ಯುವಕ ಹಂಬಲಿಸುವ ಹಾಗೂ ಆತನ ತುಡಿತವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕಾಗಿ ಆತ ಕಷ್ಟಪಡುವ ಸನ್ನಿವೇಶಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರೀಕರಿಸಲಾಗಿದೆ.