ನವದೆಹಲಿ: ಇತ್ತೀಚೆಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಸತೀಶ್ ಚಂದ್ರ ಕೌಶಿಕ್ ತಮ್ಮ 66ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಅಂದು ರಾತ್ರಿ 1 ಗಂಟೆಯ ಸುಮಾರಿಗೆ ತೀವ್ರ ಅಸ್ವಸ್ಥರಾಗಿ, ಬಳಿಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹೃದಯಾಘಾತದಿಂದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು. ನಂತರ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಬಗ್ಗೆ ಪೊಲೀಸ್ ತನಿಖೆ ಚುರುಕುಗೊಂಡಿದೆ.
66 ವರ್ಷದ ಹಿರಿಯ ನಟ ಸತೀಶ್ ಕೌಶಿಕ್ ನಿಧನರಾದ ನಂತರ ದಿಲ್ಲಿಯ ನೈಋತ್ಯ ಜಿಲ್ಲಾ ಪೊಲೀಸ್ ಕ್ರೈಂ ಸ್ಕ್ವಾಡ್, ಅವರಿದ್ದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಮೃತ ನಟ ಹೋಳಿ ಆಚರಣೆಗಾಗಿ ಆ ಫಾರ್ಮ್‌ಹೌಸ್‌ನಲ್ಲಿ ಒಂದೆರಡು ದಿನ ತಂಗಿದ್ದರು. ದಿವಂಗತ ನಟನ ಸಾವಿನ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಮೂಲಗಳ ಪ್ರಕಾರ, ತನಿಖಾ ತಂಡವು ಅವರ ಫಾರ್ಮ್‌ಹೌಸ್‌ನಲ್ಲಿ ಕೆಲ ನಿಷೇಧಿತ ಔಷಧಿಗಳನ್ನು ಪಡೆದುಕೊಂಡಿದೆ. ದಿವಂಗತ ನಟನ ಸ್ನೇಹಿತ, ಕೈಗಾರಿಕೋದ್ಯಮಿಯೋರ್ವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿದ್ದು, ಹಲವಾರು ಪ್ರಕರಣಗಳಲ್ಲಿ ಆ ಕೈಗಾರಿಕೋದ್ಯಮಿ ಕೂಡ ಬೇಕಾಗಿದ್ದಾರೆ ಎಂದು ತಿಳಿಸಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಯಾರು ಇದ್ದರು ಎಂಬುದನ್ನು ನೋಡಲು ಪೊಲೀಸರು ಅತಿಥಿಗಳ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್ ಬುಧವಾರ (ಮಾರ್ಚ್ 8) ಗುರುಗ್ರಾಮದಲ್ಲಿ ಕೊನೆಯುಸಿರೆಳೆದರು. ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಅವರ ಹೋಳಿ ಪಾರ್ಟಿ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಆಪ್ತ ಸ್ನೇಹಿತನ ಹೋಳಿ ಪಾರ್ಟಿಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿದ್ದಾಗ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.