ನವದೆಹಲಿ:ಕನ್ನಡದ ಸೂಪರ್ಹಿಟ್ ಸಿನಿಮಾ ಕಾಂತಾರದ "ವರಾಹರೂಪಂ" ಹಾಡಿನ ಮೇಲೆ ಕೃತಿಚೌರ್ಯ ಆರೋಪ ಮಾಡಿದ್ದ ಕೇರಳದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ಗೆ ಸುಪ್ರೀಂಕೋರ್ಟ್ನಲ್ಲೂ ಹಿನ್ನಡೆಯಾಗಿದೆ. ಹಾಡಿನ ಪ್ರಸಾರಕ್ಕೆ ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ತಡೆ ನೀಡಿದೆ. ಅಲ್ಲದೇ, ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಾಂತಾರ ಸಿನಿಮಾದ ವರಾಹರೂಪಂ ಹಾಡು 2015 ರಲ್ಲಿ ಬಿಡುಗಡೆ ಮಾಡಿದ ತಮ್ಮ ಮೂಲ ಸಂಯೋಜನೆಯಾದ 'ನವರಸ'ದ ನಕಲು ಎಂದು ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ಆರೋಪಿಸಿತ್ತು. ಅದನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಲು ತಡೆ ನೀಡಬೇಕು. ಅಲ್ಲದೇ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಕೃತಿಚೌರ್ಯ ಆರೋಪದಡಿ ಬಂಧಿಸಬೇಕು ಎಂದು ಕೋರಿ ಬ್ಯಾಂಡ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇಂದು ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠ ಕೇರಳ ಹೈಕೋರ್ಟ್ ಈ ಸಂಬಂಧ ವಿಧಿಸಿದ್ದ ಷರತ್ತಿಗೆ ತಡೆಯಾಜ್ಞೆ ನೀಡಿತು. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾದ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಿತು.
ವಿಚಾರಣೆಯ ವೇಳೆ ಫೆಬ್ರವರಿ 12 ಮತ್ತು 13 ರಂದು ತನಿಖಾ ಅಧಿಕಾರಿಯ ಮುಂದೆ ಹಾಜರಾಗಬೇಕು. ಈ ವೇಳೆ ಬಂಧಿಸಿದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಷರತ್ತುಗಳಿಗೆ ಒಳಪಟ್ಟು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಇದೇ ವೇಳೆ ಸುಪ್ರೀಂ ಕೋರ್ಟ್ ಪೀಠ ಹೇಳಿತು.