ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಜವಾನ್' ವಿಶ್ವಾದ್ಯಂತ ಸಖತ್ ಸದ್ದು ಮಾಡಿದ ಸಿನಿಮಾ. ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರ ಹಾಗೂ ಬಹುಬೇಡಿಕೆ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರ ವಹಿಸಿದ್ದ ಈ ಸಿನಿಮಾ ವಿಶ್ವಾದ್ಯಂತ 1,100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ತಮಿಳು ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದ ಈ ಸಿನಿಮಾವನ್ನು ಶಾರುಖ್ ದಂಪತಿಯ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಿರ್ಮಾಣ ಮಾಡಿದೆ. ಸಿನಿಮಾ ತೆರೆಕಂಡು ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದ್ದು, ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ
ಯಾವ ಒಟಿಟಿ ವೇದಿಕೆಯಲ್ಲಿ ಸಿನಿಮಾ ಲಭ್ಯ? ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ತೆರೆಕಂಡು ಚಿತ್ರಮಂದಿರದಲ್ಲಿ ಧೂಳೆಬ್ಬಿಸಿರುವ ಜವಾನ್ ಚಿತ್ರದ ಒಟಿಟಿ ಬಿಡುಗಡೆ ಮತ್ತು ರಿಲೀಸ್ ಡೇಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಜವಾನ್ ಸಿನಿಮಾವನ್ನು ಸುಮಾರು 250 ಕೋಟಿ ರೂ.ಗೆ ಖರೀದಿಸಿದೆ ಎನ್ನುವ ಮಾಹಿತಿ ಆನ್ಲೈನ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಶೀಘ್ರದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ಎಂದಿನಿಂದ ಸಿನಿಮಾ ಲಭ್ಯ: ಬಾಕ್ಸ್ ಆಫೀಸ್‌ನಲ್ಲಿ 1,103 ಕೋಟಿ ರೂ. ವ್ಯವಹಾರ ನಡೆಸಿರುವ ಜವಾನ್ ಚಿತ್ರ ನವೆಂಬರ್ 2ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ನವೆಂಬರ್ 2 ರಂದು ಬಾಲಿವುಡ್ ಕಿಂಗ್ ಎಸ್ಆರ್ಕೆ 58ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅಂದು ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಥಿಯೇಟರ್‌ಗಳಲ್ಲಿ ನೀವು ನೋಡದ ಕೆಲ ದೃಶ್ಯಗಳನ್ನು ಸೇರಿಸಿ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹಾಗಾಗಿ ನಿರ್ದೇಶಕ ಅಟ್ಲೀ ಸಿನಿಮಾ ಯಶಸ್ಸಿನ ಬಳಿಕ ಸಮಯ ವ್ಯರ್ಥ ಮಾಡದೇ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಜವಾನ್ ಸಿನಿಮಾ ಸರಿಯಾದ ಸಮಯದಲ್ಲಿ, ಭಾವನಾತ್ಮಕ ದೃಶ್ಯಗಳೊಂದಿಗೆ ಒಟಿಟಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಲಿದೆ ಎಂದು ಅಟ್ಲೀ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು.