ಬೆಂಗಳೂರು:ಹಿರಿಯ ಸಿನಿಮಾ ನಿರ್ದೇಶಕ ದೊರೈ ಭಗವಾನ್ ಖ್ಯಾತಿಯ ಭಗವಾನ್ ಅವರು ಶೀತ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಇಲ್ಲಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
86 ವರ್ಷದ ಭಗವಾನ್ ಅವರು ಸಿನಿಮಾ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು. ಆದ್ರೆ ಉಸಿರಾಟ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ.ಸಿ.ಎನ್.ಮಂಜುನಾಥ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ವರನಟ ಡಾ.ರಾಜ್ಕುಮಾರ್ ಅವರಿಗೆ ಅತೀ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ ನಿರ್ದೇಶಕ ಎಂಬ ಹೆಗ್ಗಳಿಕೆ ಭಗವಾನ್ ಅವರದ್ದಾಗಿದೆ. ಕನ್ನಡದ ದಿಗ್ಗಜ ನಿರ್ದೇಶಕ ಟಿ.ವಿ.ಸಿಂಗ್ ಠಾಕೂರ್ ಅವರ ಜೊತೆ ಪಳಗಿದ ಭಗವಾನ್, ದೊರೈ ಅವರೊಂದಿಗೆ ನಿರ್ದೇಶಿಸಿದ ಮೊದಲ ಚಿತ್ರ ‘ಜೇಡರ ಬಲೆ’ ಅವರಿಗೆ ವಿಶೇಷ ಹೆಸರು ತಂದುಕೊಟ್ಟಿತ್ತು. ದೊರೈ-ಭಗವಾನ್ ಜೋಡಿಯದು ಕಸ್ತೂರಿ ನಿವಾಸ, ಹೊಸಬೆಳಕು, ಜೀವನ ಚೈತ್ರ ಮೊದಲಾದ 32ಕ್ಕೂ ಹೆಚ್ಚು ಚಿತ್ರಗಳನ್ನು ತೆರೆಗೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ದೊರೈರಾಜ್ ಮತ್ತು ಭಗವಾನ್ ಜೋಡಿ 55 ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡವರು. ದೊರೈ ನಿಧನದ ಬಳಿಕ ದೊರೈ ಹೆಸರನ್ನು ತೆಗೆದು ಭಗವಾನ್ ಅಂತಾ ಮಾಡಿಕೊಂಡಿದ್ದರು. ಇವತ್ತಿಗೂ ಭಗವಾನ್ ಸಿನಿಮಾ ಇಂಡಸ್ಟ್ರಿಯ ಜೊತೆ ನಿಕಟ ಒಡನಾಟ ಹೊಂದಿದ್ದು ಹೊಸ ಪ್ರತಿಭೆಗಳ ಸಿನಿಮಾಗಳ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಹಾಸ್ಯ ನಟ ಮನ್ದೀಪ್ ರಾಯ್ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು