ಕ್ಯಾನ್ಸ್(ಫ್ರಾನ್ಸ್): ಕ್ಯಾನ್ಸ್ ಚಲನಚಿತ್ರೋತ್ಸವ 2023 ರಲ್ಲಿ ಫ್ರೆಂಚ್ ಚಲನಚಿತ್ರ ನಿರ್ಮಾಪಕ ಜಸ್ಟ್ ಫಿಲಿಪ್ಪಾಟ್ ನಿರ್ದೇಶನದ 'ಆ್ಯಸಿಡೆ' ಚಿತ್ರದ ಪ್ರದರ್ಶನದ ವೇಳೆ ಉಕ್ರೇನ್ ಬ್ಲಾಗರ್ ಇಲೋನಾ ಚೆರ್ನೊಬೆ ಉಕ್ರೇನ್ ಮೇಲೆ ರಷ್ಯಾದ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ಉಕ್ರೇನ್ ಧ್ವಜದ ಬಣ್ಣಗಳಾದ ನೀಲಿ ಮತ್ತು ಹಳದಿ ಬಣ್ಣದ ಉಡುಪು ಧರಿಸಿದ್ದ ಇಲೋನಾ ಚೆರ್ನೊಬೆ ರೆಡ್ ಕಾರ್ಪೆಟ್ ಮೆಟ್ಟಿಲುಗಳ ಮೇಲೆ ನಿಂತು ತನ್ನ ಮೇಲೆ ನಕಲಿ ರಕ್ತವನ್ನು ಸುರಿದುಕೊಂಡು ಕುತೂಹಲ ಸೃಷ್ಟಿಸಿದರು. ಇದರಿಂದ ತಕ್ಷಣ ಎತ್ತೆಚ್ಚುಕೊಂಡ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಮೆಟ್ಟಿಲುಗಳಿಂದ ಕೆಳಗಿಳಿಸಿದರು.
ಸದ್ಯ ಈ ಘಟನೆಯ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಇಲೋನಾ ಚೆರ್ನೊಬೆ ಕೆಂಪು ಬಣ್ಣದ ಎರಡು ಕ್ಯಾಪ್ಸುಲ್‌ಗಳನ್ನು ಹೊರತೆಗೆಯುವುದನ್ನು ಕಾಣಬಹುದು. ಅದನ್ನು ತನ್ನ ಮೇಲೆ ಸುರಿಯುವ ಮೊದಲು, ಆಕೆ ಕ್ಯಾಮೆರಾಗಳಿಗಾಗಿ ಕಡೆ ತಿರುಗಿ ಮುಗುಳ್ನಕ್ಕು ತನ್ನ ಮೈ ಮೇಲೆ ನಕಲಿ ರಕ್ತವನ್ನು ಸುರಿದುಕೊಂಡಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ಮೆಟ್ಟಿಲುಗಳಿಂದ ಕೆಳಗಿಳಿಸಿ ಕಾರ್ಯಕ್ರಮದಿಂದ ಹೊರಗೆ ಕರೆದೊಯ್ದಿದ್ದಾರೆ.
ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ, ಸಾವಿರಾರು ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಆ ಮಹಿಳೆ ಒಳ್ಳೆಯವರು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, "ಆಕೆ ಸರಿಯಾಗಿಯೇ ಮಾಡಿದ್ದಾಳೆ!" ಎಂದು ಕಾಮೆಂಟ್ ಬರೆದಿದ್ದಾರೆ. ಮತ್ತೆ ಕೆಲವರು "ಅವಳು ಅದ್ಭುತವಾಗಿ ಕಾಣುತ್ತಿದ್ದಾಳೆ ! " ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.