ಕರ್ನಾಟಕ

karnataka

ETV Bharat / entertainment

ಪ್ರೇಕ್ಷಕರ ಗೆದ್ದ 'ಬ್ರೋ': ಪವನ್​ ಕಲ್ಯಾಣ್ - ಸಾಯಿ ತೇಜ್​ ಕಾಂಬೋಗೆ ಉತ್ತಮ ರೆಸ್ಪಾನ್ಸ್​

Bro: ಪವನ್​ ಕಲ್ಯಾಣ್​ ಮತ್ತು ಸಾಯಿ ಧರಂ ತೇಜ್​ ನಟನೆಯ 'ಬ್ರೋ' ಸಿನಿಮಾ ಇಂದು ಬಿಡುಗಡೆಯಾಗಿದೆ.

By

Published : Jul 28, 2023, 3:46 PM IST

Bro
ಪವನ್​ ಕಲ್ಯಾಣ್- ಸಾಯಿ ತೇಜ್​

ಟಾಲಿವುಡ್​ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಸಿನಿಮಾ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್​. ಈವರೆಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ನಟ, ತಮ್ಮ ಸೋದರಳಿಯ ಸಾಯಿ ಧರಂ ತೇಜ್ ಜೊತೆ 'ಬ್ರೋ' ಸಿನಿಮಾ ಮಾಡಿರುವುದು ಗೊತ್ತೇ ಇದೆ. ಈ ಚಿತ್ರ ಭಾರಿ ನಿರೀಕ್ಷೆಗಳ ನಡುವೆ ಶುಕ್ರವಾರ (ಇಂದು) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ಬ್ರೋ' ತಮಿಳಿನ 'ವಿನೋದಯ ಸೀತಂ' ಚಿತ್ರದ ರಿಮೇಕ್​ ಆಗಿದ್ದು, ತಮಿಳು ನಿರ್ದೇಶಕ ಸಮುದ್ರಖನಿ ನಿರ್ದೇಶಿಸಿದ್ದಾರೆ.

ಟಾಪ್​ ಹೀರೋ ಚಿತ್ರಗಳಲ್ಲಿ ಕಮರ್ಷಿಯಲ್​ ಅಂಶಗಳು ಪ್ರಮುಖ ಪಾತ್ರವಹಿಸುತ್ತದೆ. ಪವನ್​ ಕಲ್ಯಾಣ್​ ಸಿನಿಮಾ ಬಗ್ಗೆ ಹೇಳಬೇಕೆಂದಿಲ್ಲ. ಅಭಿಮಾನಿಗಳ ನಿರೀಕ್ಷೆ ಅಷ್ಟೇ ಎತ್ತರದಲ್ಲಿರುತ್ತದೆ. ಅವರಿಗೆ ಕಿಕ್​ ನೀಡಲು ಹೊಸ ಅಂಶಗಳನ್ನು ಸೇರಿಸಿ ಅವರನ್ನು ತೃಪ್ತಿಪಡಿಸಬೇಕಾದುದು ಚಿತ್ರ ತಯಾರಕರ ಪ್ರಮುಖ ಕೆಲಸವಾಗಿರುತ್ತದೆ. ಯಾವುದೇ ಕಮರ್ಷಿಯಲ್​ ಅಂಶಗಳಿಲ್ಲದೇ ಪವನ್​ ಕಲ್ಯಾಣ್​ ಅವರನ್ನು ಪ್ರಮುಖ ಪಾತ್ರದಲ್ಲಿರಿಸಿ 'ವಿನೋದಯ ಸೀತಂ' ರಿಮೇಕ್​ ಮಾಡುವುದು ನಿಜಕ್ಕೂ ರಿಸ್ಕ್​.

ಏಕೆಂದರೆ ಅಭಿಮಾನಿಗಳು ಪವನ್​ ಅವರಲ್ಲಿ ಈವರೆಗೂ ನೋಡಿದ್ದಕ್ಕಿಂತಲೂ ಹೆಚ್ಚಿನದನ್ನು ಕಾಣಲು ಬಯಸುತ್ತಾರೆ. ಹೀಗಾಗಿಯೇ ಪವನ್​ ಬಗ್ಗೆ ಚಿರಪರಿಚಿತರಾಗಿರುವ ತ್ರಿವಿಕ್ರಮ್​ ತಮ್ಮದೇ ಬರವಣಿಗೆಯ ಶೈಲಿಯಲ್ಲಿ ಈ ಕಥೆಯನ್ನು ಕೊಂಚ ತಿರುಚಿದ್ದಾರೆ. ಹಾಗಾಗಿ ಪವನ್​ ಕಲ್ಯಾಣ್​ ಅವರ ಹಳೆಯ ಸಿನಿಮಾ ಹಾಡುಗಳು, ಅವರ ಟ್ರೇಡ್​ ಮಾರ್ಕ್​ ಮ್ಯಾನರಿಸಂ ಮತ್ತು ಕೆಲವು ಫೇಮಸ್​ ಗೆಟಪ್​ಗಳನ್ನು ಈ ಸಿನಿಮಾದಲ್ಲೂ ತೋರಿಸಲಾಗಿದೆ. ಇದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಚಿತ್ರದಲ್ಲಿ ಗಮನಾರ್ಹ ವಿಚಾರವೆಂದರೆ, ಪವನ್ ಕಲ್ಯಾಣ್ ಮತ್ತು ಸಾಯಿ ಧರಂ ತೇಜ್ ನಡುವಿನ ದೃಶ್ಯಗಳು. ಅವರಿಬ್ಬರ ಪಾತ್ರಗಳು ಆಕರ್ಷಕವಾಗಿದೆ. ಪವನ್​ ಕಲ್ಯಾಣ್​ ಅಭಿಮಾನಿಗಳ ಮನಸೂರೆಗೊಳ್ಳುವ ಮ್ಯಾನರಿಸಂನೊಂದಿಗೆ ಬಂದರೆ, ಸಾಯಿ ಧರಂ ತೇಜ್​ ಪಾತ್ರವು ಉತ್ತಮ ಮನರಂಜನೆ ನೀಡುತ್ತದೆ. ಈ ಸ್ಟಾರ್​ ನಟರ ಅಭಿಮಾನಿಗಳು ಮತ್ತು ಒಬ್ಬ ಸಾಮಾನ್ಯ ಪ್ರೇಕ್ಷಕನನ್ನೂ ತೃಪ್ತಿಪಡಿಸುವ ಹಲವು ದೃಶ್ಯಗಳು ಚಿತ್ರದಲ್ಲಿದೆ. ಪವನ್​ ಮತ್ತು ತೇಜ್​ ಜೊತೆಯಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಸಂತಸ ತಂದಿದೆ.

ಬಹುದಿನಗಳ ನಂತರ ಬ್ರಹ್ಮಾನಂದ ಮತ್ತೆ ತೆರೆ ಮೇಲೆ ಹಾಸ್ಯನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ತಣಿಕೆಲ್ಲ ಭರಣಿ, ಸುಬ್ಬರಾಜು, ವೆನ್ನೆಲ ಕಿಶೋರ್, ಅಲಿ ರೆಜಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯಲ್ಲಿ ವಿವೇಕ್ ಕುಚಿಬೋಟ್ಲ ಮತ್ತು ಟಿಜಿ ವಿಶ್ವಪ್ರಸಾದ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಗೀತ ತಮನ್ ಹಾಡು ಚಿತ್ರವನ್ನು ಉತ್ತಮವಾಗಿಸಿದೆ.

ಪ್ರೇಕ್ಷಕರು ಹೇಳಿದ್ದೇನು..?:'ಬ್ರೋ' ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಈ ಸಿನಿಮೀಯ ಪ್ರಯತ್ನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪವನ್​ ಕಲ್ಯಾಣ್​ ಅಭಿಮಾನಿಯೊಬ್ಬರು, "ಅಭಿಮಾನಿಗಳ ಕಣ್ಣಿಗೆ ಹಬ್ಬ" ಎಂದಿದ್ದಾರೆ. ಮತ್ತೊಬ್ಬರು, "ನಾನು ಸಿನಿಮಾವನ್ನು ಸಂಪೂರ್ಣವಾಗಿ ಆನಂದಿಸಿದೆ. ವಿಶೇಷವಾಗಿ ಪವನ್​ ಕಲ್ಯಾಣ್​ ಅವರ ವಿಂಟೇಜ್​ ಮ್ಯಾನರಿಸಂ. ಅವರ ವೇಷಭೂಷಗಳು ಮತ್ತು ನಟನೆ ನಿಜವಾಗಿಯೂ ಉನ್ನತ ಮಟ್ಟದ್ದಾಗಿದೆ. ತಮನ್​ ಅವರ ಸಂಗೀತವೂ ಅತ್ಯುತ್ತಮವಾಗಿದೆ. ಸಿನಿಮಾಗೆ ಸಂಪೂರ್ಣ ಪೂರಕವಾಗಿದೆ. ಸಾಯಿ ಧರಂ ತೇಜ್ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:Bro: ಪವನ್ ಕಲ್ಯಾಣ್ - ಸಾಯಿ ಧರಂ ತೇಜ್ ಕಾಂಬೋದಲ್ಲಿ 'ಬ್ರೋ' ಸಿನಿಮಾ: ಪ್ರೀ ರಿಲೀಸ್​ ಈವೆಂಟ್​ ಫೋಟೋಗಳಿವು!

ABOUT THE AUTHOR

...view details