ಅಕಿರ, ವಾಸು ನಾನ್ ಪಕ್ಕಾ ಕಮರ್ಶಿಯಲ್ ಹಾಗೂ ರಾಮಾರ್ಜುನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಅನೀಶ್ ತೇಜಶ್ವರ್. ಬೆಂಕಿ ಚಿತ್ರದ ಬಳಿಕ ಅನೀಶ್ ಯಾವ ಸಿನಿಮಾ ಮಾಡ್ತಾ ಇದ್ದಾರೆ ಎಂದು ಅವರ ಅಭಿಮಾನಿಗಳು ಯೋಚಿಸುತ್ತಿದ್ದರು. ಇದೀಗ ಅನೀಶ್ ತೇಜಶ್ವರ್ ಮುಂದಿನ ಚಿತ್ರದ ಟೈಟಲ್ ಏನು? ನಿರ್ದೇಶಕ ಯಾರು? ನಾಯಕ ನಟಿ ಯಾರಾಗ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಆರಾಮ್ ಅರವಿಂದ್ ಸ್ವಾಮಿ ಸಿನಿಮಾ: ನಟ ಅನೀಶ್ ತೇಜಶ್ವರ್ ಅವರ ಮುಂದಿನ ಸಿನಿಮಾಗೆ ನಿರ್ದೇಶಕ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶೆಟ್ಟಿ ಅನೀಶ್ ತೇಜಶ್ವರ್ ಜೊತೆ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಆರಾಮ್ ಅರವಿಂದ್ ಸ್ವಾಮಿ ಎಂಬ ಟೈಟಲ್ ಇಡಲಾಗಿದೆ. ರೊಮ್ಯಾಂಟಿಕ್ ಜೊತೆಗೆ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ನಾಯಕ ನಟಿ ಯಾರು ಎಂಬುದನ್ನು ಸಹ ಚಿತ್ರ ತಂಡ ರಿವೀಲ್ ಮಾಡಿದೆ.
ಮಿಲನ ನಾಗರಾಜ್ ಎಂಟ್ರಿ: ಲವ್ ಮಾಕ್ಟೆಲ್ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮಿಲನ ನಾಗರಾಜ್ ಅವರು ಆರಾಮ್ ಅರವಿಂದ್ ಸ್ವಾಮಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದೇ ಮೊದಲ ಬಾರಿಗೆ ನಟ ಅನೀಶ್ ತೇಜಶ್ವರ್ ಜೊತೆ ಲವ್ ಮಾಕ್ಟೆಲ್ ಬೆಡಗಿ ಮಿಲನ ನಾಗರಾಜ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಮಿಲನ ನಾಗರಾಜ್ ಬಹಳ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೌದು, ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಿಲನ ನಾಗರಾಜ್.
ಅನೀಶ್ ತೇಜಶ್ವರ್ ಜೋಡಿಯಾಗಿ ಮಿಲನ ನಾಗರಾಜ್:ಮಲೆಯಾಳಂ ಹುಡುಗಿ ಹಾಗೂ ಟೀಚರ್ ಪಾತ್ರವನ್ನು ನಿಭಾಯಿಸುತ್ತಿರುವ ಮಿಲನ ನಾಗರಾಜ್ ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಸದ್ಯದಲ್ಲೇ ಇಬ್ಬರ ಪೋಸ್ಟರ್ ರಿವೀಲ್ ಮಾಡೋದಾಗಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಅಭಿಷೇಕ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ಗುಳ್ಟು ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.