ಕರ್ನಾಟಕ

karnataka

ETV Bharat / entertainment

ಅನಂತ್ ಅಂಬಾನಿ ಮತ್ತು ರಾಧಿಕಾ ವಿವಾಹ ನಿಶ್ಚಿತಾರ್ಥ: ಡಾನ್ಸ್​ ಮಾಡಿ ಸಂಭ್ರಮಿಸಿದ ಅಂಬಾನಿ ಕುಟುಂಬಸ್ಥರು - Anant Ambani Radhika wedding engagement

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಜೋಡಿಯ ವಿವಾಹ ನಿಶ್ಚಿತಾರ್ಥ ಮುಂಬೈನಲ್ಲಿ ನಡೆದಿದೆ. ಬಾಲಿವುಡ್​ನ ಖ್ಯಾತ ನಟ ನಟಿಯರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ವಿವಾಹ ನಿಶ್ಚಿತಾರ್ಥ: ಡಾನ್ಸ್​ ಮಾಡಿ ಸಂಭ್ರಮಿಸಿದ ಅಂಬಾನಿ ಕುಟುಂಬಸ್ಥರು
Anant Ambani Radhika wedding engagement: Ambani family members celebrate

By

Published : Jan 20, 2023, 4:57 PM IST

ಮುಂಬೈ (ಮಹಾರಾಷ್ಟ್ರ):ಭಾರತದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಜೋಡಿಯ ವಿವಾಹ ನಿಶ್ಚಿತಾರ್ಥ ಸಮಾರಂಭವು ಆಂಟಿಲಿಯಾದಲ್ಲಿ ನಡೆದಿದೆ. ಬಾಲಿವುಡ್​ನ ಖ್ಯಾತನಾಮ ತಾರೆಯರೆಲ್ಲರೂ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು. ನಿಶ್ಚಿತಾರ್ಥ ಸಮಾರಂಭದ ವಿಡಿಯೋಗಳು ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿವೆ. ಅಂಬಾನಿ ಕುಟುಂಬ ಸದಸ್ಯರು ವಾಹ್ ವಾಹ್ ರಾಮ್ ಜಿ ಹಾಡಿಗೆ ಹೆಜ್ಜೆ ಹಾಕುತ್ತ ಅನಂತ ಹಾಗೂ ರಾಧಿಕಾ ಜೋಡಿಯನ್ನು ವೆಲ್ಕಮ್ ಮಾಡಿಕೊಳ್ಳುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಡಾನ್ಸ್ ವಿಡಿಯೋದಲ್ಲಿ ಮುಕೇಶ್ ಮತ್ತು ನೀತಾ ಮಧ್ಯದಲ್ಲಿದ್ದು, ಆಕಾಶ್ ಅಂಬಾನಿ, ಆಕಾಶ್ ಪತ್ನಿ ಶ್ಲೋಕ ಮೆಹ್ತಾ ಮತ್ತು ಮಗಳು ಇಶಾ ಅಂಬಾನಿ, ಪತಿ ಆನಂದ ಪಿರಾಮಲ್ ಕೂಡ ಜತೆಗಿದ್ದಾರೆ. ನವದಂಪತಿಯನ್ನು ಸ್ವಾಗತಿಸಲು ಹಮ್ ಆಪ್ಕೆ ಹೈ ಕೌನ್ ಹಾಡಿನ ಲಿರಿಕ್ಸ್ ಬದಲಾಯಿಸಿ ದಂಪತಿಯ ಹೆಸರನ್ನು ಅದರಲ್ಲಿ ಸೇರಿಸಲಾಗಿತ್ತು. ಅನಂತ್ ಮತ್ತು ರಾಧಿಕಾ ಅವರು ವಿವಾಹವಾಗುತ್ತಿರುವ ವಿಷಯವನ್ನು ಅಂಬಾನಿ ಮತ್ತು ಮರ್ಚಂಟ್ ಕುಟುಂಬದವರು 2019 ರಲ್ಲಿ ಬಹಿರಂಗಪಡಿಸಿದ್ದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಅನಂತ್ ನೀಲಿ ಬಣ್ಣದ ಉಡುಗೆ ತೊಟ್ಟಿದ್ದರು. ರಾಧಿಕಾ ಚಿನ್ನದ ಲೆಹಂಗಾ ಧರಿಸಿದ್ದರು.

ಅನಂತ್ ಮತ್ತು ರಾಧಿಕಾ ಕಳೆದ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭದ ಸಮಯದಲ್ಲಿ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದಾರೆ. ಮುಂದಿನ ಕೆಲ ತಿಂಗಳುಗಳಲ್ಲಿ ಅವರ ವಿವಾಹ ನಡೆಯಲಿದೆ. ಗುಜರಾತಿನ ಗೋಲ್ ಧನಾ ಮತ್ತು ಚುನರಿ ವಿಧಿ ಸಂಪ್ರದಾಯಗಳ ಪ್ರಕಾರ ನಿಶ್ಚಿತಾರ್ಥ ನಡೆಯಿತು. ಗೋಲ್ ಅಂದರೆ ಬೆಲ್ಲ ಹಾಗೂ ಧನಾ ಎಂದರೆ ಕೊತ್ತಂಬರಿ ಬೀಜ ಎಂದರ್ಥ. ಮಂತ್ರಘೋಷ ಮತ್ತು ಆರತಿಗಳೊಂದಿಗೆ ಮರ್ಚಂಟ್ ಕುಟುಂಬದವರನ್ನು ಅಂಬಾನಿ ಕುಟುಂಬಸ್ಥರು ಬರಮಾಡಿಕೊಂಡರು.

ರಾಧಿಕಾ ಅವರು ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ. ಆಕೆ ಗುಜರಾತಿನ ಕಚ್‌ ಮೂಲದವರು. ಅವರು ಎಂಟು ವರ್ಷಗಳ ಕಾಲ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಶ್ರೀ ನಿಭಾ ಆರ್ಟ್ಸ್‌ನ ಗುರು ಭಾವನಾ ಠಾಕರ್ ಅವರ ಶಿಷ್ಯೆ.

ಅನಂತ್ ಅಂಬಾನಿ ಭಾರತದ ಅತಿದೊಡ್ಡ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ. ಏಪ್ರಿಲ್ 10, 1995 ರಂದು ಮುಂಬೈನಲ್ಲಿ ಜನಿಸಿದ ಅನಂತ್ ಅವರಿಗೆ ಆಕಾಶ್ ಮತ್ತು ಇಶಾ ಎಂಬ ಇಬ್ಬರು ಒಡಹುಟ್ಟಿದವರಿದ್ದಾರೆ. ಅನಂತ್ ಅವರನ್ನು ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಸಾಮ್ರಾಜ್ಯದ ವಾರಸುದಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಅನಂತ್ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದಾರೆ ಮತ್ತು ನಂತರ ರೋಡ್ ಐಲೆಂಡ್‌ನ ಬ್ರೌನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅನಂತ್ ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಐಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವ ಹೊಂದಿದೆ. ಅನಂತ್‌ ಟ್ವಿಟರ್ ಅಥವಾ ಫೇಸ್‌ಬುಕ್ ಖಾತೆಗಳನ್ನು ಹೊಂದಿಲ್ಲ. ಅನಂತ್ ಕಂಪನಿಯ ಜಾಮ್‌ನಗರ ಕ್ಯಾಂಪಸ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ ಮತ್ತು ತಾಯಿ ನೀತಾ ಅವರೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್​ ನಿಶ್ಚಿತಾರ್ಥ: ಸಮಾರಂಭದ ಕಳೆ ಹೆಚ್ಚಿಸಿದ ಬಾಲಿವುಡ್ ತಾರೆಯರು

ABOUT THE AUTHOR

...view details