ಮುಂಬೈ: ಬಾಲಿವುಡ್ ನಟಿ - ನಿರ್ಮಾಪಕಿ ಆಗಿರುವ ಆಲಿಯಾ ಭಟ್ ಪ್ರತಿಷ್ಟಿತ ಬ್ರಾಂಡ್ ಗುಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಬಂಧ ದಕ್ಷಿಣ ಕೊರಿಯಾದ ಸಿಯೋಲ್ಗೆ ಹಾರಿದ್ದಾರೆ. ತಾಯಿಯಾದ ಬಳಿಕವೂ ತಮ್ಮ ಸ್ಟೈಲಿಶ್ ಲುಕ್ಗೆ ಮರಳಿರುವ ಅವರು ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಕಾಣಿಸಿಕೊಂಡರು. ಈ ವೇಳೆ, ನೀಲಿ ಬಣ್ಣದ ಡೆನಿಮ್ನ ಕ್ಯಾಶುವಲ್ ಲುಕ್ ಎಲ್ಲರ ಮನಸು ಸೆಳೆದಿದೆ.
ವಿಮಾನ ನಿಲ್ದಾಣದಲ್ಲಿ ಕಾರಿನಿಂದ ಇಳಿದು ಆಲಿಯಾ ನೀಲಿ ಬಣ್ಣದ ಡೆನಿಮ್ ಪ್ಯಾಂಟ್ಗೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಇದರ ಮೇಲೆ ಮತ್ತೆ ನೀಲಿ ಬಣ್ಣದ ಡೆನಿಮ್ ಜಾಕೆಟ್ ಧರಿಸಿದ್ದರು. ಸಂಪೂರ್ಣವಾಗಿ ಗುಚ್ಚಿ ಬ್ರಾಂಡ್ಗಳನ್ನು ಧರಿಸಿ, ಸಿಕ್ಕಾಪಟ್ಟೆ ಮುದ್ದು ಮುದ್ದಾಗಿ ಕಂಡು ಬಂದರು. ಜೊತೆಗೆ ತಮ್ಮ ಮೆಚ್ಚಿನ ಗುಚ್ಚಿ ಬ್ಯಾಗ್ ಅನ್ನು ಕೂಡ ಕೈಯಲ್ಲಿ ಹಿಡಿದಿದ್ದರು. ಆಲಿಯಾ ತೊಟ್ಟ ಈ ಸಿಂಪಲ್ ಉಡುಗೆಯ ಬೆಲೆ 12 ಲಕ್ಷ ಅಷ್ಟೇ ಎಂಬುದು ಅಭಿಮಾನಿಗಳು ಗಮನ ಸೆಳೆದಿರುವ ಅಂಶ.
ಆಲಿಯಾ ತೊಟ್ಟ ಐವರಿ ಶರ್ಟ್ನ ಬೆಲೆ 2,800 ಡಾಲರ್ ಆದರೆ, ಡೆನಿಮ್ ಕೋಟ್ ಬೆಲೆ 6,000 ಡಾಲರ್ ಇನ್ನು ಅವರ ತೊಟ್ಟ ಡೆನಿಲ್ ಕಂಫರ್ಟ್ ಫಿಟ್ ಪ್ಯಾಂಟ್ ಬೆಲೆ ಜಸ್ಟ್ 1,150 ಡಾಲರ್. ಇನ್ನು ಅವರ ಕೈಯಲ್ಲಿದ್ದ ಕಂದು ಬಣ್ಣದ ಗುಚ್ಚಿ ಸಿಗ್ನೆಚರ್ ಬ್ಯಾಬೂ ಕಲೆಕ್ಷನ್ನ ಬ್ಯಾಗ್ ಬೆಲೆ 4,700 ಡಾಲರ್. ಈ ಎಲ್ಲ ಉಡುಗೆಗಳ ಲೆಕ್ಕವನ್ನು ಹಾಕಿದಾಗ ಅವರು ಏರ್ಪೋಟ್ನಲ್ಲಿ ಕಂಡ ಲುಕ್ ಬೆಲೆ ಬರೋಬ್ಬರಿ 12,76,929 ರೂ ಆಗಿದೆ.
ಗುಚ್ಚಿ ಬ್ರಾಂಡ್ ರಾಯಭಾರಿ: ಗುಚ್ಚಿ ಬ್ರಾಂಡ್ನ ರಾಯಭಾರಿಯಾಗಿ ನೇಮಕಗೊಂಡಿರುವ ಆಲಿಯಾ, ಈ ಅದ್ದೂರಿ ಸಮಾರಂಭದಲ್ಲಿ ಮೊದಲ ಬಾರಿಗೆ ಹಾಜರಾಗುತ್ತಿದ್ದಾರೆ. ಜಾಗತಿಕ ಐಷಾರಾಮಿ ಫ್ಯಾಷನ್ ಬ್ರಾಂಡ್ ಆಗಿರುವ ಗುಚ್ಚಿಯ ಭಾರತದ ಮೊದಲ ಜಾಗತಿಕ ರಾಯಭಾರಿಯಾಗಿ ಆಲಿಯಾ ಭಟ್ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೋರಿಯಾದಲ್ಲಿ ನಡೆಯುತ್ತಿರುವ ಗುಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ರಾಹಾ ಜನನವಾದ ಬಳಿಕ ತಮ್ಮ ತಾಯ್ತನದ ಲಾಲನೆ ಪಾಲನೆಯಿಂದಾಗಿ ಆಲಿಯಾ ಕೊಂಚ ಕಾಲ ಇದರಿಂದ ದೂರವಿದ್ದರು. ಈ ಬ್ರೇಕ್ ಬಳಿಕ ಈಗ ಅವರಯ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಿನಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿ ಅವರು ಕರಣ್ ಜೋಹರ್ ನಿರ್ದೇಶನ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ಆಲಿಯಾಗೆ ನಟ ರಣವೀರ್ ಸಿಂಗ್ ಜೊತೆಯಾಗಲಿದ್ದಾರೆ. ಈ ಹಿಂದೆ ಗಲ್ಲಿ ಬಾಯ್ನಲ್ಲಿ ಆಲಿಯಾ ಭಟ್ ರಣವೀರ್ ಸಿಂಗ್ ಜೋಡಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಈ ಚಿತ್ರದ ಮೂಲಕ ಮೋಡಿ ಮಾಡಲು ಈ ಜೋಡಿ ಸಿದ್ದವಾಗಿದ್ದು, ಜುಲೈ 28ರಂದು ಇಬ್ಬರು ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಇನ್ನು ಮುದ್ದು ಮಗಳು ರಾಹಾ ಜನ್ಮಕ್ಕೂ ಮೊದಲು ರಣಬೀರ್ ಕಪೂರ್ ಜೊತೆ ನಟಿ ಆಲಿಯಾ ಭಟರ್ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ನಿಗದಿತ ಸಮಯಕ್ಕೆ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ: ಚಿತ್ರತಂಡ