ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಆದಿಪುರುಷ್' ಬಿಡುಗಡೆಗೆ ಸಜ್ಜಾಗುತ್ತಿದೆ. ಬಾಲಿವುಡ್ ನಿರ್ದೇಶಕ ಓವಂ ರಾವತ್ ರಾಮಾಯಣ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಸೀತೆಯಾಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದು, ಶನಿವಾರ ಮೋಷನ್ ಪೋಸ್ಟರ್ ಜೊತೆ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಸೀತಾನವಮಿಯಂದು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ 'ಅಮರ ನಿಮ್ಮ ನಾಮ ಜೈ ಸೀತಾ ರಾಮ' ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ಪೋಸ್ಟರ್ನಲ್ಲಿ ಲಂಕೆಯಲ್ಲಿರುವ ಸೀತಾ ಮಾತೆ ಕಣ್ಣೀರು ಹಾಕುತ್ತಾ ರಾಮನ ಬರುವಿಕೆಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಇನ್ನೊಂದರಲ್ಲಿ ಸೀತೆಯ ಹಿಂದೆ ರಾಮನಾಗಿ ಪ್ರಭಾಸ್ ನಿಂತಿದ್ದಾರೆ. ಅದೇ ಪೋಸ್ಟರ್ನಲ್ಲಿ ಶ್ರೀರಾಮ ಲಕ್ಷ್ಮಣನ ಜೊತೆಗೆ ಲಂಕೆಗೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಹೊಸದಾಗಿ ಬಿಡುಗಡೆಯಾಗಿರುವ ಆದಿಪುರುಷ್ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಟ್ರೆಂಡ್ ಆಗಿವೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಪ್ರಭಾಸ್ ಅವರ ಪೋಸ್ಟರ್ಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಟಿ-ಸೀರಿಸ್ ಬ್ಯಾನರ್ ಅಡಿ ಭೂಷಣ್ ಕುಮಾರ್ ನಿರ್ಮಿಸಿದ ಈ ಚಿತ್ರದಲ್ಲಿ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರ ನಿರ್ವಹಿಸಿದರೆ, ದೇವದತ್ತ ನಾಗೆ ಹನುಮಂತನ ಪಾತ್ರವನ್ನು ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಜೂನ್ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಿದ್ಧಗೊಳ್ಳುತ್ತಿದೆ. ಈ ಕ್ರಮದಲ್ಲಿ ಸಿನಿಮಾ ಪ್ರಮೋಷನ್ ಆರಂಭಿಸಿರುವ ಚಿತ್ರತಂಡ ಒಂದೊಂದಾಗಿ ಹೊಸ ಪೋಸ್ಟರ್ ಮತ್ತು ಲಿರಿಕಲ್ ಸಾಂಗ್ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.