ಬೆಂಗಳೂರು: ಕಾರು ಚಾಲಕನಿಂದಾದ ಆಕಸ್ಮಿಕ ತಪ್ಪಿನಿಂದ ನಿನ್ನೆ (ಸೋಮವಾರ) ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ಮುಜುಗರಕ್ಕೆ ಒಳಗಾಗಿದ್ದರು. ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೋಗುವ ಸಂದರ್ಭದಲ್ಲಿ ರಚಿತಾ ರಾಮ್ ಅವರಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ನಟಿ ಕಾರ್ಮಿಕನ ಬಳಿ ಕ್ಷಮೆಯಾಚಿಸದೇ ಸ್ಥಳದಿಂದ ಹೊರಟು ಹೋಗಿದ್ದರು ಎಂದು ಆರೋಪಿಸಲಾಗಿತ್ತು. ಸಾಮಾಜಿಕ ಜಾಲತಾಣ ಸೇರಿದಂತೆ ಕಾರ್ಮಿಕರ ಒಕ್ಕೂಟಗಳಿಂದಲೂ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಚಿತಾ ರಾಮ್, ಇಂದು ಕಾರ್ಮಿಕನನ್ನು ತಮ್ಮ ಮನೆಗೆ ಕರೆಸಿಕೊಂಡು ಕ್ಷಮೆಯಾಚಿಸಿದ್ದಾರೆ. "ಲಾಲ್ ಬಾಗ್ ಕಾರ್ಯಕ್ರಮಕ್ಕೆ ಹೋದ ವೇಳೆ ಆಕಸ್ಮಿಕವಾಗಿ ಘಟನೆ ನಡೆಯಿತು. ಇಂದು ನಾನು ಅವರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಕಾರು ಗುದ್ದಿದ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮ ಕಡೆಯಿಂದ ತಪ್ಪಾಗಿತ್ತು. ನಾನು ಬೇಕಂತಲೇ ಮಾಡಿದ ತಪ್ಪಲ್ಲ. ಆಕಸ್ಮಿಕವಾಗಿ ನಡೆದಿದೆ. ಹೀಗಾಗಿ, ಅಣ್ಣಾ ನಾನು ನಿಮ್ಮಲ್ಲಿ ಮನಸಾರೆ ಕ್ಷಮೆ ಕೇಳುತ್ತೇನೆ. ನಮ್ಮ ಚಾಲಕನ ಕಡೆಯಿಂದಲೂ ಕ್ಷಮೆ ಯಾಚಿಸುತ್ತಿದ್ದೇನೆ. ಈ ವಿಚಾರವಾಗಿ ಕಾರ್ಮಿಕರಿಗೆ ನೋವುಂಟಾಗಿದ್ದರೆ, ಇನ್ನೊಮ್ಮೆ ಸಾರಿ ಕೇಳುತ್ತೇನೆ" ಎಂದು ತಿಳಿಸಿದರು.
ರಚಿತಾ ರಾಮ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾರ್ಮಿಕ ರಂಗಪ್ಪ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದಾರೆ.