ಕಾಮಿಡಿ ಹಾಗು ನಾಯಕನ ಸ್ನೇಹಿತನ ಪಾತ್ರಗಳ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡು ನಂತರ ಹೀರೋ ಆದ ನಟ ಕೋಮಲ್. ಗೋವಿಂದಾಯ ನಮಃ ಅಂತಹ ಸೂಪರ್ ಹಿಟ್ ಚಿತ್ರದಿಂದ ಬೇಡಿಕೆ ನಟನಾಗಿರುವ ಕೋಮಲ್ ಕೆಂಪೇಗೌಡ 2 ಚಿತ್ರದ ಬಳಿಕ ಚಿತ್ರರಂಗದಿಂದ ಕೆಲ ಕಾಲ ದೂರ ಉಳಿದಿದ್ದರು. ಇದೀಗ ಕಾಲಾಯ ನಮಃ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಹೊಸ ಸಿನಿಮಾವೊಂದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕಾಲಾಯ ನಮಃ ಸಿನಿಮಾಗೆ ಪ್ರಕಾಶ್ ರೈ ಎಂಟ್ರಿ.. ಕಾಲಾಯ ನಮಃ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರ ತಂಡದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹೌದು, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ " ಕಾಲಾಯ ನಮಃ" ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಕೋಮಲ್ ಕುಮಾರ್ ಜೊತೆ ನಟಿ ಆಸಿಯಾ ಫಿರ್ದೋಸ್, ನಟರಾದ ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಅನುಸೂಯ ಕೋಮಲ್ ಕುಮಾರ್ ನಿರ್ಮಾಣದ ಸಿನಿಮಾ..ಕೋಮಲ್ ಪತ್ನಿ ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗುತ್ತೆ ಅಂತಾ ನಟ ಕೋಮಲ್ ಕುಮಾರ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಲಾಂಗ್ ಬ್ರೇಕ್ ನಂತರ ಚಿತ್ರರಂಗಕ್ಕೆ ರಿ ಎಂಟ್ರಿ..ಲಾಂಗ್ ಬ್ರೇಕ್ ನಂತರ ಕೋಮಲ್ ಈ ಕಾಲಾಯ ನಮಃ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಈ ಸಿನಿಮಾ ತೆರೆ ಕಾಣೋ ಮೊದಲೇ ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚಲು ಅವರು ಸಜ್ಜಾಗಿದ್ದಾರೆ. ಹೌದು, ಕಾಲಾಯ ನಮಃ ಸಿನಿಮಾ ಜೊತೆಗೆ ರೋಲೆಕ್ಸ್ ಎಂಬ ಪವರ್ಫುಲ್ ಟೈಟಲ್ ಹೊಂದಿರುವ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ ನಟ ಕೋಮಲ್.