ಕನ್ನಡ ಚಿತ್ರರಂಗದಲ್ಲಿ ವಾಯುಪುತ್ರ, ಯುವ ಸಾಮ್ರಾಟ್ ಎಂದು ಕರೆಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ. ಚಿತ್ರರಂಗದಲ್ಲಿ ಮಾಸ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ಇವರ ಅಕಾಲಿಕ ನಿಧನ ಕರುನಾಡ ಜನರಿಗೆ ಕಣ್ಣೀರು ತರಿಸಿತ್ತು. ಚಿರು ತಮ್ಮ ನಿಧನಕ್ಕೂ ಮುನ್ನ 'ರಾಜಮಾರ್ತಾಂಡ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾ ನಾಳೆ (ಅ.6) ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಣ್ಣನ ಅನುಪಸ್ಥಿತಿಯಲ್ಲಿ ಧ್ರುವ ಸರ್ಜಾ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಚಿತ್ರಕ್ಕೆ ಧ್ರುವ ಸರ್ಜಾ ಅಲ್ಲದೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ನಟರಾದ ದರ್ಶನ್, ನೆನಪಿರಲಿ ಪ್ರೇಮ್, ಶರಣ್, ನಟಿ ತಾರ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಇದೀಗ ಬಹುಭಾಷಾ ನಟ, ಚಿರು ಅವರ ಸೋದರ ಮಾವ 'ರಾಜಮಾರ್ತಾಂಡ' ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ನಮ್ಮ ಮನೆಯ ರಾಜಕುಮಾರ ಮತ್ತು ನಿಮ್ಮೆಲ್ಲರ ಪ್ರೀತಿಯ ಚಿರು ಸರ್ಜಾ ನಟಿಸಿದ ಚಿತ್ರ 'ರಾಜಮಾರ್ತಾಂಡ' ಈಗ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಿಗೂ, ನಿರ್ದೇಶಕರಿಗೂ ಹಾಗೂ ಎಲ್ಲಾ ಕಲಾವಿದರಿಗೂ, ತಾಂತ್ರಿಕ ವರ್ಗದವರಿಗೂ, ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ಚಿರು ಮತ್ತು ಧ್ರುವ ಇಬ್ಬರು ಸೇರಿ ಒಂದು ಸಿನಿಮಾ ಮಾಡಬೇಕು ಅಂತ ನನಗೆ ಆಸೆಯಿತ್ತು. ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಕನಸು ನಿಜವಾದಂತಿದೆ. ಚಿತ್ರದಲ್ಲಿ ಅಣ್ಣನಿಗೆ ತಮ್ಮನೇ ಕಂಠದಾನ ಮಾಡಿದ್ದಾನೆ. ಚಿರು ಅಭಿನಯ, ಧ್ರುವನ ಕಂಠ. ಚಿತ್ರ ನೋಡುವಾಗ ನಮಗೆ ಇಬ್ಬರನ್ನು ಸೇರಿ ನೋಡಿದ ರೀತಿಯೇ ಫೀಲ್ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರು ಈ ಸಿನಿಮಾನ ನೋಡಿ. ನಿಮ್ಮ ಪ್ರೀತಿ ಸಹಕಾರ ಯಾವಾಗಲೂ ಈ ಸಿನಿಮಾ ಮೇಲೆ ಇರಬೇಕು. - ನಟ ಅರ್ಜುನ್ ಸರ್ಜಾ