ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ನಂತರ ಒಂದರಂತೆ ಚಿತ್ರಗಳನ್ನು ಘೋಷಿಸುತ್ತಲೇ ಇರುತ್ತಾರೆ. ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ನಟ ಮಹಾನ್ ಸಾಹಿತಿ ರವೀಂದ್ರನಾಥ್ ಠಾಗೋರ್ ಜೀವನಾಧಾರಿತ ತಮ್ಮ 538ನೇ ಸಿನಿಮಾವನ್ನು ಇತ್ತೀಚೆಗಷ್ಟೇ ಘೋಷಿಸಿದ್ದರು. ಇಂದು ಮತ್ತೊಂದು ಚಿತ್ರವನ್ನು ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ವಿಶೇಷವೆಂದರೆ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ ಅನುಪಮ್ ಖೇರ್, ಆ ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ.
ಅನುಪಮ್ ಖೇರ್ 539ನೇ ಸಿನಿಮಾ:ಬಾಲಿವುಡ್ ನಟ ಅನುಪಮ್ ಖೇರ್ ಅವರು ತಮ್ಮ ಮುಂಬರುವ 539ನೇ ಚಿತ್ರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ, ಸಿಂಹಾಸನದ ಮೇಲೆ ಕುಳಿತಿದ್ದಾರೆ. ನಟನ ಕೈಯಲ್ಲಿ ತ್ರಿಶೂಲವಿದೆ ಮತ್ತು ಅವರ ಸಿಂಹಾಸನದ ಸುತ್ತಲೂ ಹಾವುಗಳು ಸುತ್ತಿಕೊಂಡಿವೆ. ಇದೊಂದು ಯಾವುದೋ ಹಳೇ ಕಥೆಯನ್ನು ಹೇಳುವಂತಿದೆ.
ಪ್ಯಾನ್ ಇಂಡಿಯಾ ಸಿನಿಮಾ:ಈ ಪೋಸ್ಟ್ ಅನ್ನು ಶೇರ್ ಮಾಡಿರುವ ನಟ, ''ನನ್ನ 539ನೇ ಚಿತ್ರ, ಯಾವುದೋ ಪುರಾಣ ಅಥವಾ ದೊಡ್ಡ ಕಥೆಯನ್ನು ಇದು ಆಧರಿಸಿಲ್ಲ. ಆದರೆ ಭಾರತದ ಅತಿದೊಡ್ಡ ಬಹುಭಾಷಾ ಫ್ಯಾಂಟಸಿ ಚಿತ್ರವಾಗಲಿದೆ. ಚಿತ್ರದ ಸಬ್ಜೆಕ್ಟ್ ಬಹಳ ಚೆನ್ನಾಗಿದೆ. ಚಿತ್ರ ತಯಾರಕರು ಈ ಸಿನಿಮಾದ ಸಂಪೂರ್ಣ ಮಾಹಿತಿಯನ್ನು ಆಗಸ್ಟ್ 24 ರಂದು ತಿಳಿಸಲಿದ್ದಾರೆ. ಅಷ್ಟರಲ್ಲಿ ನನ್ನ ಲುಕ್ ನೋಡಿ ಸಿನಿಮಾ ಹೇಗಿದೆ ಅಂತಾ ನೀವು ಊಹಿಸಬಹುದು, ಜೈ ಹೋ'' ಎಂದು ಬರೆದುಕೊಂಡಿದ್ದಾರೆ.
ಅನುಪಮ್ ಖೇರ್ 538ನೇ ಸಿನಿಮಾ: ಇತ್ತೀಚೆಗಷ್ಟೇ 538ನೇ ಸಿನಿಮಾವನ್ನು ನಟ ಅನುಪಮ್ ಖೇರ್ ಘೋಷಿಸಿದ್ದರು. ಹಲವು ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಮತ್ತು ಇತ್ತೀಚಿನ ದಿನಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಸದ್ದು ಮಾಡಿದ ಬಾಲಿವುಡ್ ಬಹುಬೇಡಿಕೆಯ ನಟ ಬೆಂಗಾಲಿ ಸಾಹಿತಿ ರವೀಂದ್ರನಾಥ್ ಠಾಗೋರ್ ಪಾತ್ರವನ್ನು ನಿರ್ವಹಿಸುವುದಾಗಿ ತಿಳಿಸಿದ್ದಾರೆ.