ಬೆಂಗಳೂರು:ಲೋಕಸಭೆಯಲ್ಲಿ 22 ಸ್ಥಾನ ಗೆಲ್ಲುವ ಜೊತೆ ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಯಲ್ಲಿಯೂ ಗೆಲುವು ಸಾಧಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಹಿಂದಿರುಗಿದ ನಂತರ ಮಾತನಾಡಿದ ಯಡಿಯೂರಪ್ಪ, ಎಲ್ಲರಿಗೂ ಒಳ್ಳೆಯದಾಗಲಿ. ಬರಗಾಲ ನೀಗಲಿ, ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲಿ. ಜನರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲು ತಿರುಪತಿಗೆ ಹೋಗಿದ್ದೆ. ಬೆಳಿಗ್ಗೆ ದೇವರಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದೇನೆ ಎಂದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗಿದ ಬಿಎಸ್ವೈ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮಾಧ್ಯಮಗಳು ವಿಭಿನ್ನ ಸಮೀಕ್ಷಾ ವರದಿ ನೀಡುತ್ತಿವೆ. ಅದೇನೇ ಇದ್ದರೂ ನಾವು 22 ಸ್ಥಾನ ಖಂಡಿತ ಗೆಲ್ಲುತ್ತೇವೆ. ಮತ್ತು ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ನಾಳೆಯಿಂದ ನಾನು ಚಿಂಚೋಳಿ, ಕುಂದಗೋಳ ಪ್ರವಾಸ ಹೋಗುತ್ತಿದ್ದೇನೆ ಎಂದರು.
ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಾಗುವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಎಲ್ಲಾ ಫಲಿತಾಂಶದ ಮೇಲೆ ಆಧರಿಸಿದೆ. ರಾಜಕೀಯ ಧ್ರುವೀಕರಣದವನ್ನು ಕಾದು ನೋಡೋಣ. ಈಗಲೇ ನಾನು ಏನೂ ಹೇಳಲ್ಲ. ಕಾಂಗ್ರೆಸ್ - ಜೆಡಿಎಸ್ನಲ್ಲಿ ಸಾಕಷ್ಟು ಗೊಂದಲ ಇದೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡರ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಫಲಿತಾಂಶದ ಬಳಿಕ ಇದಕ್ಕೆಲ್ಲಾ ಉತ್ತರ ಸಿಗುತ್ತದೆ ಎಂದರು.