ತುಮಕೂರು: ಜಾನುವಾರು ಕಳ್ಳರನ್ನು ಬಂಧಿಸಲು ತುಮಕೂರು ಪೊಲೀಸರು 'ಆಪರೇಷನ್ ಅಂಬಾ' ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6,20,000 ರೂ.ಗಳ ಜಾನುವಾರುಗಳನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
'ಆಪರೇಷನ್ ಅಂಬಾ' ಕಾರ್ಯಾಚರಣೆ.. ಜಾನುವಾರು ಕಳ್ಳರ ಬಂಧನ! - cattle transportation latest news
ಜಾನುವಾರು ಕಳ್ಳರನ್ನು ಬಂಧಿಸಲು ತುಮಕೂರು ಪೊಲೀಸ್ ಇಲಾಖೆ ವತಿಯಿಂದ ಆಪರೇಷನ್ ಅಂಬಾ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಯಲ್ಲಿ 6,20,000 ರೂ.ಗಳ ಜಾನುವಾರುಗಳನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾವಗಡ ತಾಲೂಕಿನ ಮಾಧವರಾಯನ ಪಾಳ್ಯದ ನರಸಯ್ಯ, ಆಂಧ್ರಪ್ರದೇಶದ ಗೊರಂಟ್ಲ ಗ್ರಾಮದ ಆದಿಮೂರ್ತಿ, ಪಾವಗಡ ನಗರದ ಸಣ್ಣ ಬಾಬು, ಟೆಂಪೋ ಚಾಲಕ ಬಾಲಕೃಷ್ಣ ಬಂಧಿತ ಆರೋಪಿಗಳಾಗಿದ್ದಾರೆ. ಜು. 23 ರಂದು ಮಧುಗಿರಿ ತಾಲೂಕು ಕಂಬತ್ತನಹಳ್ಳಿ ಗ್ರಾಮದ ನಾಗಮ್ಮ ಎಂಬುವರು ಎರಡು ನಾಟಿ ಹಸು ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ ಜಾನುವಾರು ಕಳ್ಳರನ್ನು ಬಂಧಿಸಲು ಪೊಲೀಸ್ ಇಲಾಖೆ ವತಿಯಿಂದ ಆಪರೇಷನ್ ಅಂಬಾ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮಧುಗಿರಿ ಸರ್ಕಲ್ ಇನ್ಸ್ ಪೆಕ್ಟರ್ ಸರ್ದಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಚನೆ ಮಾಡಿದ್ದರು. ಸದ್ಯ ದನಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತಂಡ ಐದು ಪ್ರಕರಣದಡಿ 7 ಹಸುಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇವು ಸುಮಾರು 6,20,000 ರೂ ಮೌಲ್ಯದ ಜಾನುವಾರುಗಳು ಎಂದು ಅಂದಾಜಿಸಲಾಗಿದೆ.