ಮೈಸೂರು : ಟಿಪ್ಪು ಕೊಡಗಿಗೆ ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದರೆ ಕೊಡವರು ಹೆದರುತ್ತಾರೆಯೇ. ನೀವು ಮಡಿಕೇರಿ ಯಾತ್ರೆಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಪಕ್ಕದ ಕೇರಳ ರಾಜ್ಯದ ಎಸ್ಡಿಪಿಐನ ನಿಮ್ಮ ಸಾಕು ಮಕ್ಕಳನ್ನು ಕರೆತಂದರೂ ಮಡಿಕೇರಿಯವರು ಹೆದರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋ ಯಾತ್ರೆ ಹಮ್ಮಿಕೊಂಡಿದ್ದು, ಈ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಜೊತೆಗೆ 2017 ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಿದ್ದೀರಿ. ಅದಕ್ಕೆ ಮುಂದೆ ನಿಮಗೆ ಚಾಮುಂಡೇಶ್ವರಿ ತಾಯಿ ಅವಕಾಶ ಕೊಡಲಿಲ್ಲ. ಈಗ ಮಡಿಕೇರಿಯ ಬಸವೇಶ್ವರ ದೇವಾಲಯಕ್ಕೆ ಹೋಗಿ ಬಸವ ತತ್ವದ ಅನುಯಾಯಿಗಳಿಗೆ ನೋವುಂಟು ಮಾಡಿದ್ದೀರಿ ಎಂದರು.
ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಬಸವೇಶ್ವರ ಅನುಯಾಯಿಗಳ ನಂಬಿಕೆ ಒಡೆದಂತೆ : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಬಸವ ಅನುಯಾಯಿಗಳನ್ನು ಒಡೆಯಲು ಪ್ರಯತ್ನ ಮಾಡಿದ್ದರು. ಈಗ ಬಸವೇಶ್ವರ ದೇವಾಲಯಕ್ಕೆ ಮಾಂಸ ತಿಂದು ಹೋಗಿ ಅನುಯಾಯಿಗಳು ನಂಬಿಕೆ ಒಡೆಯುವ ಕೆಲಸ ಮಾಡಿದ್ದಾರೆ. ಬಸವ ಅನುಯಾಯಿಗಳು ಮಾಂಸಾಹಾರವನ್ನು ತ್ಯಜಿಸಿದವರು ಎಂದರು.