ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದಿನಿಂದ ಮೈಸೂರು ಅರಮನೆ ಹೊರ ಆವರಣದಲ್ಲಿ ಗಜಪಡೆಯ ತಾಲೀಮು ಆರಂಭಗೊಂಡಿದೆ.
ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೂ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ತಾಲೀಮು ನಡೆಸುವುದು ವಾಡಿಕೆ. ಅಂತೆಯೇ ಇಂದು ತಾಲೀಮು ಆರಂಭಕ್ಕೂ ಮುನ್ನ ಅರಮನೆ ಅವರಣದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕ್ಯಾಪ್ಟನ್ ಅಭಿಮನ್ಯು, ಭೀಮ, ಗೋಪಾಲ ಸ್ವಾಮಿ, ಅರ್ಜುನ, ವಿಕ್ರಮ, ಧನಂಜಯ, ಗೋಪಿ, ಕಾವೇರಿ ಹಾಗು ಶ್ರೀರಾಮ ಆನೆಗಳು ಅಭ್ಯಾಸ ಶುರು ಮಾಡಿದವು.
ಅರಮನೆ ಹೊರ ಆವರಣದಲ್ಲಿ ಗಜಪಡೆ ತಾಲೀಮು ಆರಂಭ ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗಿತ್ತು. ಎರಡು ವರ್ಷಗಳ ನಂತರ ಮತ್ತೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆ ವಾಯುವಿಹಾರಕ್ಕೆ ತೆರಳುತ್ತಿವೆ. ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆಯಿಂದ ಹೊರಟು ಕೆ ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಸರ್ಕಲ್, ಬಂಬೂ ಬಜಾರ್ ರಸ್ತೆ ಮೂಲಕ ಬನ್ನಿ ಮಂಟಪ ತಲುಪುತ್ತವೆ. ಮತ್ತೆ ಬನ್ನಿ ಮಂಟಪದಿಂದ ಅರಮನೆಗೆ ವಾಪಸ್ ಆಗಲಿವೆ.
ಅರಣ್ಯ ಅಧಿಕಾರಿ ಕರಿಕಾಳನ್ ಮಾತನಾಡಿ, "ದಸರಾ ಮಹೋತ್ಸವ ಪ್ರಯುಕ್ತ ಆನೆಗಳಿಗೆ ಇಂದಿನಿಂದ ತಾಲೀಮು ಪ್ರಾರಂಭಿಸಲಾಗಿದೆ. ಈಗಾಗಲೇ ಆನೆಗಳ ತೂಕ ಲೆಕ್ಕಾಚಾರ ಹಾಕಲಾಗಿದೆ. ಎಲ್ಲ ಆನೆಗಳೂ ಅರೋಗ್ಯವಾಗಿವೆ. ನಗರ ವಾತಾವರಣಕ್ಕೆ ಹೊಂದಿಕೊಂಡಿವೆ. ಒಂದು ವಾರದ ನಂತರ ಭಾರ ಹೊರುವ ತಾಲೀಮು ಪ್ರಾರಂಭ ಮಾಡಲಾಗುತ್ತದೆ" ಎಂದರು.
ಇದನ್ನೂ ಓದಿ: ಮೈಸೂರು ದಸರಾ: ಅರಮನೆಯೊಳಗೆ ತಾಲೀಮು ನಡೆಸಿದ ಗಜಪಡೆ