ಮೈಸೂರು: ರಾಮನಗರ ಜಿಲ್ಲೆಯ ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆಗಳನ್ನು ಜೀರ್ಣಿಸಿಕೊಳ್ಳುವುದು ಯಾವ ಲೆಕ್ಕ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕೆಗಳನ್ನು ಜೀರ್ಣಿಸಿಕೊಳ್ಳುತ್ತೇನೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಹಿಂದೆ ಕೇಂದ್ರ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದವನು ನಾನು. ಈಗ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಲು ಹೊರಟ್ಟಿದ್ದಾರೆ. ಇದು ನೂರಕ್ಕೆ ಇನ್ನೂರರಷ್ಟು ರಾಜಕೀಯ ಗಿಮಿಕ್ ಎಂದು ಟೀಕಿಸಿದರು.
ಪಾದಯಾತ್ರೆಗೆ ಮುನ್ನ ಫ್ರಿವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಜೊತೆಗೆ ಪಾದಯಾತ್ರೆಗೆ ಬರುವವರು ಕಬ್ಬಿನ ಜ್ಯೂಸ್ ಅನ್ನು ಚಾಮರಾಜನಗರದಿಂದ ತರಬೇಕು. ಅಷ್ಟೇ ಅಲ್ಲ, ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಸರ್ಟಿಫಿಕೇಟ್ ಕೊಡುತ್ತಾರಂತೆ. ಈ ರೀತಿ ಕಾಂಗ್ರೆಸ್‌ನ ಹೈಟೆಕ್ ಪಾದಯಾತ್ರೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
'ರಾಮನಗರ ಜಿಲ್ಲೆ ಮಾಡಿದವನು ನಾನು'
ರಾಮನಗರ ಜಿಲ್ಲೆ ಮಾಡಿದವನು ನಾನು. ಜಿಲ್ಲೆ ಅಭಿವೃದ್ಧಿ ಮಾಡಿದವನು ನಾನು ಮೈಸೂರಿನಲ್ಲಿ ಇದ್ದೇನೆ. ಆದರೆ ವೇದಿಕೆಯ ಮೇಲೆ ಸಚಿವರು ಮತ್ತು ಸಂಸದರು ಕಿತ್ತಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ರಾಮನಗರಕ್ಕೆ ನಾನು ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿಗೆ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್, ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. ಇದ್ದಾಕ್ಕಾಗಿ 360 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ. ಆದರೆ ನಮ್ಮ ಸರ್ಕಾರ ಇಳಿಯುತ್ತಿದಂತೆ ಎಲ್ಲರೂ ಎಲ್ಲವನ್ನೂ ನಿಲ್ಲಿಸಿಬಿಟ್ಟರು. ಬಿಜೆಪಿ ಮತ್ತು ಕಾಂಗ್ರೆಸ್ ರಾಮನಗರಕ್ಕೆ ಏನನ್ನೂ ಮಾಡಿಲ್ಲ. ಅಭಿವೃದ್ಧಿ ಮಾಡಿದವನು ನಾನು ಎಂದು ಹೆಚ್.ಡಿ. ಕುಮಾರಸ್ವಾಮಿ ಇಂದಿನ ವೇದಿಕೆಯ ಮೇಲಿನ ಕಿತ್ತಾಟದ ಘಟನೆಗೆ ಪ್ರತಿಕ್ರಿಯೆ ನೀಡಿದರು.
ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಹಾಡಿದ ಕುಮಾರಸ್ವಾಮಿ
ಬಾನಿಗೊಂದು ಎಲ್ಲೆ ಎಲ್ಲಿದೆ ಎಂಬ ಹಾಡಿನ ಮೂಲಕ ಡಿಕೆಶಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ, ಕಾಂಗ್ರೆಸ್ ನವರು ಮೇಕೆದಾಟು ಯೋಜನೆಗೆ ಸಜ್ಜಾಗುತ್ತಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಆಗಲೇ ಚುನಾವಣೆ ನಾವು ಗೆದ್ದು ಬಿಟ್ಟೆವು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆ ಬಿಲ್ಲನ್ನು ತೆಗೆಯುತ್ತೇವೆ. ಈ ಬಿಲ್ಲನ್ನು ತೆಗೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಯಾಕಿಷ್ಟು ಆತುರ? ಚುನಾವಣೆಗೆ ಇನ್ನೂ ಟೈಮ್ ಇದೆ ಎಂದು ಬಾನಿಗೊಂದು ಎಲ್ಲೆ ಎಲ್ಲಿದೆ ಎಂಬ ಹಾಡು ಹಾಡಿದರು.
ಒಮಿಕ್ರಾನ್‌ನ ಇಂತಹ ಪರಿಸ್ಥಿತಿಯಲ್ಲಿ ಪಾದಯಾತ್ರೆ ಬೇಕಿತ್ತಾ? ನಿಮ್ಮ ಪ್ರತಿಷ್ಠೆಗಳಿಗೆ ಜನರನ್ನು ಬಲಿ ಕೊಡಬೇಡಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಹೆಚ್‌ಡಿಕೆ ಕಿವಿಮಾತು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕುತ್ತಿದೆ: ಎಚ್ಡಿಕೆ