ಮಂಗಳೂರು: ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಹಿಂದೂ ಯುವಕನ ಮೃತದೇಹವನ್ನು ಮುಸ್ಲಿಂ ಯುವಕರು ಸೇರಿಕೊಂಡು ಸಾರ್ವಜನಿಕರ ನೆರವಿನೊಂದಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಹಿಂದೂ ಯುವಕನ ಅಂತ್ಯಸಂಸ್ಕಾರ ನಡೆಸಿ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು
ಅಪಘಾತದಲ್ಲಿ ಮೃತಪಟ್ಟಿದ್ದ ಯುವಕನ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ಹಿಂದೂ ಸಂಪ್ರದಾಯದಂತೆ ನಡೆಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಸೋಮವಾರ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಎಕ್ಸ್‌ಪ್ರೆಸ್ ಬಸ್ ಕಡಬ ಸಮೀಪದ ನೀರಾಜೆ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಯುವಕ ಮಣಿಕಂಠ ಎಂಬುವರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು, ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು.
ಮೃತ ಮಣಿಕಂಠ ತನ್ನ ಅಕ್ಕನ ಮನೆಯ ಪಕ್ಕದಲ್ಲೇ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಅಪಘಾತ ನಡೆದ ಸಮಯದಲ್ಲಿ ಅವರ ಅಕ್ಕ ಕೇರಳದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಆತನ ಮುಸ್ಲಿಂ ಗೆಳೆಯರೇ ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲದೆ ಅವರು, ಹಿಂದೂ ಬಾಂಧವರ ಸಹಕಾರದೊಂದಿಗೆ ಕಡಬದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಮಣಿಕಂಠನ ಅಂತ್ಯ ಸಂಸ್ಕಾರವನ್ನು ನೆರವೇರಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.