ಮಂಗಳೂರು:ಗಾಂಜಾ ಹೊಂದಿರುವ ಆರೋಪಿಯನ್ನು ಬಂಧಿಸಿರುವ ಧರ್ಮಸ್ಥಳ ಠಾಣಾ ಪೊಲೀಸರು 60 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಗಂಗೋತ್ರಿ ವಸತಿ ಗೃಹದ ಬಳಿ ನಡೆದಿದೆ.
ಉಳಾಯಿಬೆಟ್ಟು ಗ್ರಾಮದ ನಿವಾಸಿ ಪ್ರದೀಪ್ ಪೂಜಾರಿ(26) ಬಂಧಿತ ಆರೋಪಿ. ಈತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಯು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಸಬ್ ಜೈಲಿನಲ್ಲಿ ನಡೆದ ಮಾಡೂರು ಇಸುಬು ಎಂಬಾತನ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ ಈತನ ಮೇಲೆ ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಮುಲ್ಕಿ ಠಾಣೆಯಲ್ಲಿ ಡಕಾಯಿತಿಗೆ ಯತ್ನ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
ಈತ ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದಾನೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.