ಮಂಗಳೂರು:ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿಯವರ ಕೃಪಾಕಟಾಕ್ಷದಿಂದ ಅಲ್ಲಲ್ಲಿ ಅಕ್ರಮ ಮರುಳುಗಾರಿಕೆ ನಡೆಯುತ್ತಿದೆ. ಅಲ್ಲದೆ ಪಚ್ಚನಾಡಿ ಪ್ರದೇಶದಲ್ಲಿ ಅರಣ್ಯಗಳಲ್ಲಿನ ಮರಗಳನ್ನು ಕಡಿದು ಸಾಗಾಟ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದರು.
ಶಾಸಕ ಭರತ್ ಶೆಟ್ಟಿ ಕುಮ್ಮಕ್ಕಿನಿಂದ ಅಕ್ರಮ ಮರಳುಗಾರಿಕೆ ದಂಧೆ: ಮೊಯ್ದೀನ್ ಬಾವಾ ಆರೋಪ ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಗ್ಗಿಲ್ಲದೆ ಎಲ್ಲಾ ಕಡೆಗಳಲ್ಲಿಅಕ್ರ ಅಕ್ರಮ ಮರಳುಗಾರಿಕೆ ನಡೆಸಿ ದ.ಕ ಜಿಲ್ಲೆಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳಲ್ಲಿ ಸ್ಥಳೀಯ ಜನರನ್ನು ಸೇರಿಸಿ ಹೋರಾಟವನ್ನು ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಅಲ್ಲದೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ವಾರಕ್ಕೊಂದು ಸುದ್ದಿಗೋಷ್ಠಿ ಕರೆದು ಎಳೆ ಎಳೆಯಾಗಿ ತಿಳಿಸುತ್ತೇನೆ ಎಂದು ಆಗ್ರಹಿಸಿದರು.
ದೇಶದಲ್ಲಿ, ರಾಜ್ಯದಲ್ಲಿ ಹಾಗೂ ಜಿಲ್ಲಾಡಳಿತವೂ ತಮ್ಮದೇ ಎಂದು ಮಂಗಳೂರು ಉತ್ತರದ ಶಾಸಕರು ಅಧಿಕಾರಿಗಳನ್ನು ಬೆದರಿಸಿ ಎಗ್ಗಿಲ್ಲದೆ ಕಾನೂನನ್ನು ಕೈಗೆ ತೆಗೆದುಕೊಂಡು ಕಾರ್ಯಕರ್ತರಿಂದ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ತಣ್ಣೀರುಬಾವಿ, ಮೀನಕಳಿಯ ಹಾಗೂ ಅದ್ಯಪಾಡಿಗಳಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು?.
ಈ ಬಗ್ಗೆ ವಿಚಾರಿಸಿದರೆ, ಮನೆಕಟ್ಟಲು ಮಣ್ಣು ತೆಗೆಯಲಾಗುತ್ತಿದೆ, ಇದಕ್ಕೆ ನಮಗೆ ಪರವಾನಿಗೆ ದೊರೆತಿದೆ ಎಂಬ ಉತ್ತರ ಬರುತ್ತಿದೆ. ಆದರೆ ಅವರು ಶುದ್ಧ ಸುಳ್ಳು ಹೇಳುತ್ತಿದ್ದು, ಸರ್ಕಾರಿ ಜಮೀನುಗಳಲ್ಲಿ ಮರಳು ತೆಗೆದು ಆ ಪ್ರದೇಶದಲ್ಲಿರುವ ಆರ್ಎಂಸಿ ಪ್ಲ್ಯಾಂಟ್ಗೆ ಹಾಕಲಾಗುತ್ತಿದೆ. ಮನೆ ಕಟ್ಟುವುದಿದ್ದಲ್ಲಿ ಅಲ್ಲಿಯೇ ಹಾಕಬೇಕಿತ್ತು. ಅದು ಬಿಟ್ಟು ಪ್ಲ್ಯಾಂಟ್ ಬಳಿ ಯಾಕೆ ಹಾಕಬೇಕಿತ್ತು. ರಾತ್ರಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದ್ದರೆ, ಬೆಳಗ್ಗೆ ಹಗಲು ದರೋಡೆ ಮಾಡಲಾಗುತ್ತದೆ. ಮಂಗಳೂರು ಉತ್ತರದ ಶಾಸಕ ಡಾ. ವೈ.ಭರತ್ ಶೆಟ್ಟಿಯವರ ಕೃಪಾಕಟಾಕ್ಷದಿಂದ ಇದು ನಡೆಯುತ್ತಿದೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದರು.