ಮಂಗಳೂರು:ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಎಸ್ಟಿ, ಪ್ರವಾಹ ಪರಿಹಾರ ಕೊಡದೆ ಅನ್ಯಾಯ ಮಾಡಲಾಯಿತು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಹೆಸರು ಕೆಡಿಸಲೆಂದೇ ರಾಜ್ಯದ ಬಿಜೆಪಿ ಸಂಸದರು ಜಿಎಸ್ಟಿ, ಪ್ರವಾಹ ಪರಿಹಾರದ ಹಣ ತರಲು ಕೇಂದ್ರದ ಜತೆಗೆ ಮಾತನಾಡಲಿಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ. ತಮಿಳುನಾಡಿನಲ್ಲಿ ಹಿಂದೆ ಎಐಡಿಎಂಕೆ ಸರ್ಕಾರ ಇದ್ದಾಗ ಅವರೊಳಗಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿತ್ತು. ಆದರೆ, ಕರ್ನಾಟಕ ರಾಜ್ಯದ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತಾಳಿದೆ.
ಬಿಎಸ್ವೈ ಸರ್ಕಾರ ಇದ್ದಾಗ ಅವರಿಗೆ ಕಾಂಗ್ರೆಸ್ ಯಾವುದೇ ಅನ್ಯಾಯ ಮಾಡಿಲ್ಲ. ಬಿಜೆಪಿ ಸಂಸದರು, ಶಾಸಕರು, ಸಚಿವರು ಯಡಿಯೂರಪ್ಪ ಅವರನ್ನು ಕೆಟ್ಟ ಶಬ್ದಗಳಲ್ಲಿ ಟೀಕೆ ಮಾಡಿದರು. ಈಗ ಬಂದಿರುವ ಹೊಸ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಯಡಿಯೂರಪ್ಪಗೆ ಮಾಡಿದಂತೆ ಮಾಡಬೇಡಿ ಎಂದು ಖಾದರ್ ಸಲಹೆ ನೀಡಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನನ್ನ ಹೆಸರು ಪ್ರಸ್ತಾವಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಜಿಲ್ಲಾ ಮಟ್ಟದಲ್ಲಿದ್ದವನನ್ನು ವಿಧಾನಸಭೆಯಲ್ಲಿ ಹೆಸರು ಪ್ರಸ್ತಾಪಿಸಿ ರಾಜ್ಯ ಮಟ್ಟದ ನಾಯಕನನ್ನಾಗಿ ಮಾಡಿದರು. ಇದೀಗ ಲೋಕಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪಿಸಿ ರಾಷ್ಟ್ರ ಮಟ್ಟದ ನಾಯಕನನ್ನಾಗಿ ಮಾಡಿದ್ದಾರೆ. ರಾಜಕೀಯಲ್ಲಿ ಒಳ್ಳೆಯ ವಿಚಾರ, ಕೆಟ್ಟ ವಿಚಾರ ಎಂಬುದಿಲ್ಲ. ಹೀಗೆಯೆ ನನ್ನ ಹೆಸರನ್ನು ಪ್ರಸ್ತಾಪ ಮಾಡಿ ಎಂದು ವ್ಯಂಗ್ಯವಾಡಿದರು.
ರಾಜಕೀಯ ಜಂಜಾಟ ಬೇಕಿರಲಿಲ್ಲ:
ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ? ಎಂಬ ಅನುಮಾನ ಮೂಡಿಸಿದೆ. ಕೊರೊನಾ ನಿರ್ವಹಣೆ ಮಾಡಲು ಯಡಿಯೂರಪ್ಪ ಸರ್ಕಾರ ವಿಫಲವಾಗಿತ್ತು. ನೂತನ ಸಿಎಂ ಏನು ಮಾಡುತ್ತಾರೆ ಎಂಬುದನ್ನು ನೋಡಬೇಕು. ಸಚಿವರಿಲ್ಲದೇ ಈ ಸಂದರ್ಭದಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿ ಅಧಿಕಾರಿಗಳು ಇದ್ದಾರೆ. ಒಂದೆಡೆ ಕೊರೊನಾ ಸಮಸ್ಯೆ, ಮತ್ತೊಂದೆಡೆ ನೆರೆ ಸಮಸ್ಯೆ ಇರುವ ಸಂದರ್ಭದಲ್ಲಿ ಈ ರಾಜಕೀಯ ಜಂಜಾಟ ಬೇಕಿರಲಿಲ್ಲ. ಈ ಒಳರಾಜಕೀಯ ಮಾಡಲು ಕಾಯಬಹುದಿತ್ತು ಎಂದರು.
ಲಸಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಪೊಲಿಯೋ ನಿರ್ಮೂಲನೆಗಾಗಿ ಮೈಕ್ರೋ ಲೆವೆಲ್ನಲ್ಲಿ ಮಾಡಿದ ಕಾರ್ಯಕ್ರಮದಿಂದ ದೇಶದಲ್ಲಿ ಪೋಲಿಯೊ ನಿರ್ಮೂಲನೆ ಆಗಿದೆ. ಅದೇ ರೀತಿಯ ಕಾರ್ಯಕ್ರಮ ಕೊರೊನಾ ಲಸಿಕೆ ನೀಡುವಲ್ಲಿ ಆಗಬೇಕು ಎಂದರು.