ಮಂಗಳೂರು:ಸ್ಯಾನಿಟೈಸರ್, ಪಿಪಿಇ ಕಿಟ್, ಮಾಸ್ಕ್ ಖರೀದಿಯಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದರೂ, ಸ್ಪೀಕರ್ ತನಿಖೆ ನಡೆಸಬಾರದು ಎಂದು ಸೂಚಿಸಿದ್ದಾರೆ. ಅದನ್ನು ಗಮನಿಸಿದರೆ ಅವರ ನಡವಳಿಕೆ ಸರಿಯಿಲ್ಲ ಎಂದು ತಿಳಿಯುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಸಾಕಷ್ಟು ಸಲಹೆಗಳನ್ನು ನೀಡಿತ್ತು. ಆದರೆ, ಸರ್ಕಾರ ಒಪ್ಪಿಲ್ಲ. ಕೋವಿಡ್ ಸಮಯದಲ್ಲೂ ಆರೋಗ್ಯ ಮಂತ್ರಿ ಹಾಗೂ ಶಿಕ್ಷಣ ಮಂತ್ರಿ ಕಚ್ಚಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲಾ ರಾಜ್ಯಗಳಲ್ಲೂ ಸಾಕಷ್ಟು ಪ್ಯಾಕೇಜ್ ಘೋಷಿಸಿದ್ದರೂ, ಕರ್ನಾಟಕದಲ್ಲಿ 2,200 ಕೋಟಿ ಮಾತ್ರ ಘೋಷಿಸಲಾಗಿದೆ. ಅದಿನ್ನು ಬಿಡುಗಡೆಯೇ ಆಗಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಶ್ವೇತಪತ್ರವೊಂದನ್ನು ಹೊರಡಿಸಬೇಕು. ಯಾವುದಕ್ಕೆಲ್ಲ ಎಷ್ಟು ಹಣ ಖರ್ಚಾಗಿದೆ ಎಂದು ಹೇಳಲಿ. ಹೇಳದಿದ್ದರೆ, ಮುಂದಿನ ದಿನಗಳಲ್ಲಿ ಇದರ ವಿರುದ್ಧ ನಾವು ಹೋರಾಡಲಿದ್ದೇವೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಲಸೆ ಕಾರ್ಮಿಕರಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ, ಅದಕ್ಕೆ ನಾವು ಹಣ ಕೊಡಲು ತಯಾರಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಅವರು ಒಂದು ಕೋಟಿ ರೂ. ಚೆಕ್ ನೀಡಲು ಹೋದಾಗ ಸರ್ಕಾರಕ್ಕೆ ಜ್ಞಾನೋದಯವಾಯಿತು ಎಂದು ಹೇಳಿದರು.
ಎಲ್ಲ ವಲಸೆ ಕಾರ್ಮಿಕರನ್ನು ಉಚಿತವಾಗಿ ಕಳುಹಿಸಿಕೊಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೂ, ಈ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವೂ ಇಲ್ಲ. ಕಾರ್ಮಿಕರ ರೋದನೆ ಕೇಳುತ್ತಿಲ್ಲ ಎಂದು ಕಿಡಿಕಾರಿದರು.