ನೆಲ್ಯಾಡಿ (ದಕ್ಷಿಣ ಕನ್ನಡ): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉದನೆ ಪೇಟೆಯ ಸಮೀಪ ಹರಿಯುವ ಗುಂಡ್ಯ ಹೊಳೆಯ ದಡದ ನದಿ ಪರಂಬೋಕು ಜಾಗದಲ್ಲಿ ಭ್ರಷ್ಟಾಚಾರ ನಡೆಸಿ ಅಕ್ರಮವಾಗಿ ನಿರ್ಮಿಸುತ್ತಿರುವ ವಾಣಿಜ್ಯ ಕಟ್ಟಡ ತೆರವುಗೊಳಿಸಿ ವರದಿ ನೀಡುವಂತೆ ಕಡಬ ತಹಸೀಲ್ದಾರ್‌ಗೆ ಹೈಕೋರ್ಟ್ ಆದೇಶ ನೀಡಿದೆ.
ಉದನೆ ಪೇಟೆಯಲ್ಲಿನ ಕೊಣಾಜೆ ಗ್ರಾಮದ ಸರ್ವೆ ನಂಬ್ರ 137 ರಲ್ಲಿ ಸುಜಿ ತೋಮಸ್ ಎಂಬವರು ಗುಂಡ್ಯ ಹೊಳೆಯ ನದಿ ಕಿನಾರೆಯಲ್ಲಿ ನದಿ ಪರಂಬೋಕು ಜಾಗದಲ್ಲಿ ಗ್ರಾಮ ಪಂಚಾಯಿತಿನಿಂದ ಯಾವುದೇ ಪರವಾನಗಿ ಪಡೆಯದೇ 94ಸಿ ಯಲ್ಲಿ ಮಂಜೂರಾದ ಜಾಗದಲ್ಲಿ ಅನಧಿಕೃತವಾಗಿ ವಾಣಿಜ್ಯ ಕಟ್ಟಡ ಕಟ್ಟುತ್ತಿರುವ ಬಗ್ಗೆ ದೂರಲಾಗಿದೆ. ಇದನ್ನು ತೆರವುಗೊಳಿಸುವಂತೆ ಶಿರಾಡಿಯ ಟಿ.ಜೆ. ಮ್ಯಾಥ್ಯು ಎಂಬವರು ನೀಡಿದ ದೂರಿನ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 8 ವಾರದ ಒಳಗಾಗಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ವರದಿ ಸಲ್ಲಿಸುವಂತೆ ಕಡಬ ತಹಸೀಲ್ದಾರ್ ಗೆ ಆದೇಶ ನೀಡಿದೆ.
94 \ ಸಿ ಮಂಜೂರಾತಿಯಲ್ಲಿ ನಡೆದಿದೆ ಭಾರೀ ಅಕ್ರಮ : ತಪ್ಪಿತಸ್ಥ ಸುಜಿ ತೋಮಸ್ ಅವರಿಗೆ ಜಾಗ ಮತ್ತು ಮನೆ ಇದೆ. ಅದಾಗ್ಯೂ ಹೆದ್ದಾರಿ ಬದಿಯಲ್ಲಿ 0.03 ಎಕ್ರೆ ಜಾಗವನ್ನು 94 ಸಿ ಅಡಿಯಲ್ಲಿ ಮಂಜೂರು ಮಾಡಲಾಗಿದೆ. ಇದರಲ್ಲಿ ವಾಣಿಜ್ಯ ಕಟ್ಟಡ ಇದ್ದು, ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ 94 \ ಸಿ ಮಂಜೂರಾತಿಗೆ 2012 ರ ಮೊದಲಿನ ಮನೆ ಅಥವಾ ಕನಿಷ್ಠ ಗುಡಿಸಲಾದರೂ ಇರಬೇಕು ಎಂಬ ನಿಯಮ ಇದ್ದಾಗ್ಯೂ ನದಿ ಪರಂಬೋಕು ಜಾಗವನ್ನು ಇವರ ಹೆಸರಿಗೆ 94 \ ಸಿ ಅಡಿಯಲ್ಲಿ ಮಂಜೂರಾತಿ ಮಾಡಲಾಗಿದೆ ಎಂದು ದೂರಲಾಗಿದೆ. ಇದೀಗ ಈ ನಿವೇಶನದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವುದಾಗಿ ಎಂದು ಟಿ.ಜೆ. ಮ್ಯಾಥ್ಯು ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
ಗ್ರಾಮ ಪಂಚಾಯತ್,ಜಿಲ್ಲಾಧಿಕಾರಿಗಳ ತಡೆಯಾಜ್ಞೆ ಉಲ್ಲಂಘನೆ : ನದಿ ಪರಂಬೋಕು ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಟಿ.ಜೆ. ಮ್ಯಾಥ್ಯು ಅವರು ಕೊಣಾಜೆ ಗ್ರಾಮ ಪಂಚಾಯಿತಿಗೆ ಆಕ್ಷೇಪ ದೂರು ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿಯು ಕಟ್ಟಡ ನಿರ್ಮಾಣ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಜೊತೆಗೆ 94 \ ಸಿ ಅಡಿ ಕಡಬ ತಹಸೀಲ್ದಾರ್ ಮಂಜೂರಾತಿ ಮಾಡಿರುವುದರ ವಿರುದ್ಧ ಟಿ.ಜೆ. ಮ್ಯಾಥ್ಯು ಅವರು ಪುತ್ತೂರು ಸಹಾಯಕ ಕಮೀಷನರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಅರ್ಜಿಯನ್ನು ಹಿಂದಿನ ಸಹಾಯಕ ಕಮೀಷನರ್ ತಿರಸ್ಕರಿಸಿ ಸುಜಿ ತೋಮಸ್ ಪರ ಆದೇಶ ನೀಡಿರುವುದಾಗಿ ಹೇಳಲಾಗಿದೆ.