ಕಲಬುರಗಿ:ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ಕೊಡೋದು ನನ್ನ ಜವಾಬ್ದಾರಿ. ಜನರು ಸಂಕಷ್ಟದಲ್ಲಿರೋ ಕಾರಣ ಆಡಳಿತ ಪಕ್ಷಕ್ಕೆ ಸಹಕಾರ ಕೊಡಲೇಬೇಕು, ಇದನ್ನ ಬಿಟ್ಟು ನಾನು ಬಿಜೆಪಿ ಬಗ್ಗೆ ಯಾವತ್ತು ಸಾಫ್ಟ್ ಕಾರ್ನರ್ ಆಗೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಬಗ್ಗೆ ಯಾವತ್ತು ಸಾಫ್ಟ್ ಕಾರ್ನರ್ ಆಗೋದಿಲ್ಲ; ಕಾಂಗ್ರೆಸ್ ಆರೋಪಕ್ಕೆ ಹೆಚ್‌ಡಿಕೆ ತಿರುಗೇಟು
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಮಾಡಿದ ಅವರು, ಬಿಜೆಪಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಸಹಕಾರ ನೀಡಿದ್ದೇನೆ. ಜನರು ಸಂಕಷ್ಟದಲ್ಲಿರೋ ಕಾರಣ ಆಡಳಿತ ಪಕ್ಷಕ್ಕೆ ಸಹಕಾರ ಕೊಡಲೇಬೇಕಿರುವುದು ನನ್ನ ಜವಾಬ್ದಾರಿಯಾಗಿತ್ತು. ಇದನ್ನ ಬಿಟ್ಟು ನಾನು ಬಿಜೆಪಿ ಬಗ್ಗೆ ಯಾವತ್ತು ಸಾಫ್ಟ್ ಕಾರ್ನರ್ ಆಗೋದಿಲ್ಲ. ಮೈಸೂರು ಪಾಲಿಕೆಯಲ್ಲಿ ನಾವು ಅವಕಾಶವಾದಿ ರಾಜಕಾರಣ ನಡೆಸಿಲ್ಲ. ಅಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಗೆ ಸಿದ್ಧವಿರಲಿಲ್ಲ. ನಮ್ಮ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಬೆಂಬಲಿಸಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.
'ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ'
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ 42 ಅಭ್ಯರ್ಥಿಗಳು ಜೆಡಿಎಸ್ ಪಕ್ಷದಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಭರಾಟೆಯ ಪ್ರಚಾರದಲ್ಲಿ ತೊಡಗಿವೆ. ಈ ಚುನಾವಣೆ ಮುಖಾಂತರ ಕಲಬುರಗಿಯಲ್ಲಿ ಜೆಡಿಎಸ್ ಅಧಿಕಾರ ನಡೆಸುತ್ತೆ. ನಗರದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ಜನರನ್ನ ಕಾಡುತ್ತಿವೆ. ನಾನು ಸಿಎಂ ಆಗಿದ್ದಾಗ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನ ಬಗೆಹರಿಸಿದ್ದೇನೆ. ಪ್ರವಾಹದಿಂದ ತತ್ತರಿಸಿದ ಜನರಿಗೆ ಇದುವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್‌ನವರು ಪ್ರತಿದಿನ ಭ್ರಷ್ಟಾಚಾರದ ಬಗ್ಗೆನೇ ಚರ್ಚಿಸುತ್ತಾರೆ. ಆದರೆ ಅವರ ಅಧಿಕಾರದ ಅವಧಿಯಲ್ಲೇ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಪಾಲಿಕೆ ಚುನಾವಣೆಯಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
'ನಾನು ಸಿಎಂ ಆಗಿದ್ದಾಗ ಮಾತ್ರ ರೈತರಿಗೆ ಉತ್ತೇಜನ ಸಿಕ್ಕಿದ್ದು'
ಕಲ್ಯಾಣ ಕರ್ನಾಟಕ ಅಂತಾ ಬಿಜೆಪಿ ಬರೀ ಮರುನಾಮಕರಣ ಮಾಡಿದೆ ಅಷ್ಟೇ. ಕೋವಿಡ್ ಅನಾಹುತಗಳು ಹೆಚ್ಚು ನಡೆದಿದ್ದು ಕಲಬುರಗಿಯಲ್ಲಿ. ಈ ಸರ್ಕಾರದಲ್ಲಿ ಯಾವುದೇ ಪೂರ್ವಾಲೋಚನೆಗಳು ಇಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ವತಿಯಿಂದ ಒಂದು ಸಂಸ್ಥೆ ಆರಂಭಿಸಬೇಕೆಂದು ಹೇಳಿದ್ದಾರೆ. ರೈತರು ಬೆಳೆದ ಬೆಳೆಗಳನ್ನ ರಫ್ತು ಮಾಡಲು ಸಂಸ್ಥೆಯೊಂದನ್ನು ಆರಂಭಿಸಬೇಕೆಂದು ಮನವಿ ಮಾಡಿದ್ದಾರೆ. ರೈತರಿಗೆ ಹೆಚ್ಚು ಉತ್ತೇಜನ ಸಿಕ್ಕಿದ್ದು ನಾನು ಸಿಎಂ ಆಗಿದ್ದಾಗ ಮಾತ್ರ ಎಂದು ಹೆಚ್‌ಡಿಕೆ ಹೇಳಿದ್ದಾರೆ.
'ಜೆಡಿಎಸ್ ಕಾರ್ಯಕರ್ತರನ್ನು ಅವಮಾನಿಸುವುದಿಲ್ಲ'
ಕಾರ್ಯಕರ್ತರು ಸರಿಯಿಲ್ಲ ಎಂಬ ಮಾತನ್ನ ಮಾಧ್ಯಮಗಳು ತಿರುಚಿವೆ. ಯಾವುದೋ ಸಂದರ್ಭಕ್ಕೆ ಅನುಗುಣವಾಗಿ ಹೇಳಿದ್ದೇನೆ. ಯಾವುದೋ ಒಂದು ಮಾಧ್ಯಮದಲ್ಲಿ ನನ್ನ ಹೇಳಿಕೆಯನ್ನ ತಿರುಚಿ ದೊಡ್ಡಮಟ್ಟದಲ್ಲಿ ತೋರಿಸಿದ್ದಾರೆ. ನಾನು ನಮ್ಮ ಕಾರ್ಯಕರ್ತರಿಗೆ ಅವಮಾನ ಮಾಡಿಲ್ಲ. ದುಡಿಯುವ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಜೆಡಿಎಸ್‌ನಲ್ಲಿ ಮಾತ್ರವಿದೆ ಎಂದ ಅವರು, ಜಿ.ಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ನಾನು ಯಾರನ್ನು ಹೋಗಿ ಅಂತಾ ದುರಹಂಕಾರದಿಂದ ಹೇಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಮೈಸೂರು ಗ್ಯಾಂಗ್ ರೇಪ್‌ಗೆ ಸರ್ಕಾರದ ವೈಫಲ್ಯವೇ ಕಾರಣ'
ಸರ್ಕಾರದ ವೈಫಲ್ಯವೇ ಮೈಸೂರು ಗ್ಯಾಂಗ್ ರೇಪ್‌ಗೆ ಕಾರಣವಾಗಿದೆ. ಈ ಹಿಂದೆ ಕೂಡ ಇಂತಹ ಅನೇಕ ಕೃತ್ಯಗಳನ್ನು ಎಸಗಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿದ್ದಾರೆ. ಅದೆಷ್ಟು ಅಮಾಯಕ ಮಹಿಳೆಯರು ಕಿರಾತಕರಿಗೆ ಬಲಿಯಾಗಿದ್ದಾರೋ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.