ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆ ಚುರುಕುಗೊಂಡಿದೆ. ಬಿಜೆಪಿ ಜೊತೆಗೆ ಈಗ ಕಾಂಗ್ರೆಸ್ ಕೊರಳಿಗೂ ಅಕ್ರಮದ ಉರುಳು ಸುತ್ತಿಕೊಳ್ಳುತ್ತಿದೆ. ಇಂದು ಅಕ್ರಮದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತ ಕಾಂಗ್ರೆಸ್ ಮುಖಂಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮೂಲಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಸಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತಂಡ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಎಂಬಾತನನ್ನು ಬಂಧಿಸಿತು.
ಪಿಎಸ್ಐ ನೇಮಕಾತಿ ಅಕ್ರಮ ಕೇಸ್ನ ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆ ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಫಂಕ್ಷನ್ ಹಾಲ್ನಲ್ಲಿ ನಾಳೆ 101 ಸಾಮೂಹಿಕ ವಿವಾಹವನ್ನು ಮಹಾಂತೇಶ್ ಪಾಟೀಲ್ ಹಾಗೂ ಆತನ ಸಹೋದರ ಆರ್.ಡಿ.ಪಾಟೀಲ್ ಏರ್ಪಡಿಸಿದ್ದರು. ಇಂದು ಅಲ್ಲಿಗೆ ತೆರಳಿದ ಸಿಐಡಿ ತಂಡ ಆರೋಪಿಯನ್ನು ಬಂಧಿಸಿದೆ. ನಿನ್ನೆಯಷ್ಟೇ ಕಾಂಗ್ರೆಸ್ ಶಾಸಕ ಎಮ್.ವೈ.ಪಾಟೀಲ್ ಗನ್‌ಮ್ಯಾನ್ ಹಯ್ಯಾಳ ದೇಸಾಯಿಯನ್ನು ಬಂಧಿಸಲಾಗಿತ್ತು. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೇರಿಕೆಯಾಗಿದೆ.
ಇದನ್ನೂ ಓದಿ:'ಮುನ್ನಾಭಾಯ್' ಸ್ಟೈಲ್ನಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು : ಬಂಧಿತರ ಸಂಖ್ಯೆ 12ಕ್ಕೆ ಏರಿಕೆ
ಕೊರಪಟ್ಟಿ ಹಿಡಿದು ಎಳೆದೊಯ್ದ ಡಿವೈಎಸ್ಪಿ: ಬಂಧನಕ್ಕೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳಿಗೆ, 'ನಮ್ಮ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಹುಷಾರ್' ಎಂದು ಮಹಾಂತೇಶ್ ಪಾಟೀಲ್ ಆವಾಜ್ ಹಾಕಿದ್ದರಂತೆ. ಇದರಿಂದ ಕೋಪಗೊಂಡ ಸಿಐಡಿ ಡಿವೈಎಸ್ಪಿ ಶಂಕರಗೌಡ, ಆರೋಪಿ ಕಾಂಗ್ರೆಸ್ ನಾಯಕ ಮಹಾಂತೇಶ್ ಪಾಟೀಲ್ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದರು. ಈ ಸಂದರ್ಭದಲ್ಲಿ ಬೆಂಬಲಿಗರು ತನಿಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಕಂಡುಬಂತು.
ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ಮಹಾಂತೇಶ್ ಪಾಟೀಲ್ ಸಹೋದರ ಆರ್.ಡಿ.ಪಾಟೀಲ್ ಕೂಡ ಡಿವೈಎಸ್ಪಿ ಶಂಕರಗೌಡ ಅವರಿಗೆ ಕರೆ ಮಾಡಿ ಆವಾಜ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪಿಎಸ್ಐ ಪರೀಕ್ಷಾರ್ಥಿ ಅಭ್ಯರ್ಥಿಗಳಿಂದ ಹಣ ಪಡೆದು ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷೆ ಬರೆಸಿರುವ ಗುರುತರ ಆರೋಪ ಇವರ ಮೇಲಿದೆ.
ಮಹಾಂತೇಶ್ ಪಾಟೀಲ್ ಮನೆ ಶೋಧ: ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ್, ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಲಬುರಗಿಯ ಹೈಕೋರ್ಟ್ ಬಳಿ ಇರುವ ಆರೋಪಿ ಮಾಹಾಂತೇಶ ಪಾಟೀಲ್ ಮನೆ ಶೋಧ ಕಾರ್ಯ ಮಾಡಲಾಗುತ್ತಿದೆ. ಅಕ್ರಮಕ್ಕೆ ಸಂಬಂಧಿಸಿದ ದಾಖಲಾತಿಗಳಿಗಾಗಿ ಶೋಧ ನಡೆದಿದ್ದು, ಆರೋಪಿ ಮಹಾಂತೇಶ ಪಾಟೀಲ್‌ನನ್ನು ಸಹ ಮನೆಗೆ ಕರೆತರಲಾಗಿದೆ.