ಕಲಬುರಗಿ :ರಾಜ್ಯದ ಗ್ರಾಮೀಣ ಭಾಗದ ಪ್ರದೇಶದಲ್ಲಿ ವಾಸಿಸುತ್ತಿರುವ ಯುವಜನತೆಗೆ ಕೌಶಲ್ಯ ತರಬೇತಿ ನೀಡಲು ಸಿದ್ಧಗೊಂಡಿರುವ ಸುಸಜ್ಜಿತ "ಕೌಶಲ್ಯ ರಥಗಳಿಗೆ" ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾಲ್ಕು ತರಬೇತಿ ನೀಡುವ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ 2.5 ಲಕ್ಷ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಯುವ ಜನತೆಯ ಪ್ರಮಾಣ ಶೇ.46 ರಷ್ಟಿದೆ. ಹೀಗಾಗಿ, ಇವರಿಗೆ ಉತ್ತಮ ಶಿಕ್ಷಣ ಮತ್ತು ಕೌಶಲ್ಯ ನೀಡಿ ಉದ್ಯೋಗ ಒದಗಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರ ಪಂಡಿತ್ ದೀನ್ ದಯಾಳ್ ಯೋಜನೆಯಡಿ ಕೌಶಲ್ಯ ತರಬೇತಿ ನೀಡುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಸ್ವಾವಲಂಬಿಯನ್ನಾಗಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಕೌಶಲ್ಯ ರಥಗಳು ರಾಜ್ಯದ ಪ್ರತಿ ಗ್ರಾಮ ಪಂಚಾಯತ್‌ಗೆ ಸಂಚರಿಸಿ ಸ್ಥಳದಲ್ಲಿಯೇ ಉಚಿತವಾಗಿ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಬ್ಯೂಟಿ ಥೆರಾಪಿಸ್ಟ್ ಕುರಿತು ಯುವಕ-ಯುವತಿಯರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಿ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಇದರಿಂದ ಅವರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಲಿದೆ. ತರಬೇತಿ ಪಡೆದವರು ಗೃಹ ಬಳಕೆ ಮಿಕ್ಸಿ, ಮೋಟಾರ್ ವೈಂಡಿಂಗ್ ಹೀಗೆ ಸ್ಥಳೀಯವಾಗಿ ಕಂಪನಿಗಳೊಂದಿಗೆ ಜೋಡಿಸಿ ಉದ್ಯೋಗ ಒದಗಿಸುವ ಹ್ಯಾಂಡ್ ಹೋಲ್ಡಿಂಗ್ ಜವಾಬ್ದಾರಿ ಸಹ ಕೌಶಲ್ಯ ಅಭಿವೃದ್ಧಿ ನಿಗಮ ಮಾಡಲಿದೆ ಎಂದರು.