ವಿಜಯನಗರ/ಹುಬ್ಬಳ್ಳಿ :ಮಸೀದಿಗಳಲ್ಲಿ ಆಜಾನ್‌ಗೆ ವಿರುದ್ಧವಾಗಿ ಈ ಹಿಂದೆ ಘೋಷಿಸಿದಂತೆ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ ಸೋಮವಾರ ಹನುಮಾನ್ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ ಸದ್ದು ಮೊಳಗಲಾರಂಭಿಸಿದೆ. ಮುಸಲ್ಮಾನರು ನಮಾಜ್ ಮಾಡುವ ಸಮಯಕ್ಕೆ ಸರಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಸುಪ್ರಭಾತ ಮೊಳಗಿದೆ.
ವಿಜಯನಗರದಲ್ಲಿ ಆಜಾನ್ VS ಸುಪ್ರಭಾತ :ಜಿಲ್ಲೆಯಲ್ಲಿ ಆಜಾನ್ V/S ಸುಪ್ರಭಾತ ವಿಚಾರ ಮುನ್ನೆಲೆಗೆ ಬಂದಿದೆ. ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಕರೆಯ ಮೇರೆಗೆ ಹೊಸಪೇಟೆ ನಗರದ ಶ್ರೀಪಾದಗಟ್ಟೆ ಆಂಜನೇಯ ದೇವಾಲಯದ ಬಳಿ ಇಂದು ಮುಂಜಾನೆ ಸುಪ್ರಭಾತ ಹಾಗೂ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹೊಸಪೇಟೆಯ ಶ್ರೀಪಾದಗಟ್ಟೆ ಆಂಜನೇಯ ದೇವಾಲಯ ಹಾಗೂ ಅಶ್ವತ್ಥ್ ನಾರಾಯಣ ಕಟ್ಟೆ ಬಳಿ ಹನುಮಾನ ಚಾಲೀಸಾ ಪಠಣೆ ಮಾಡಲಾಗುತ್ತಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಧಾರವಾಡದಲ್ಲಿಯೂ ಮೊಳಗಿದ ಸುಪ್ರಭಾತ : ನಗರದ ಮಸೀದಿ ಎದುರು ಇರುವ ರಾಮ ಮಂದಿರದಲ್ಲಿ ಮುಂಜಾನೆ 5-10ಕ್ಕೆ ಸುಪ್ರಭಾತ ಆರಂಭಗೊಂಡಿತು. ಕಾಕರ್ ಮಸೀದಿ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಉಳಿದಂತೆ ಟಿಕಾರೆ ರಸ್ತೆಯ ಆಂಜನೇಯ ದೇವಸ್ಥಾನ, ಲಕ್ಷ್ಮೀ ನಾರಾಯಣ ದೇವಸ್ಥಾನ ಸೇರಿದಂತೆ ಹಲವೆಡೆ ಧ್ವನಿವರ್ಧಕದಲ್ಲಿ ಸುಪ್ರಭಾತ, ಭಜನೆ ಹಾಕಲಾಗಿತ್ತು.
ವಿವಾದಿತ ದೇವಸ್ಥಾನದಲ್ಲಿ ಮೊದಲು ಮೊಳಗಿದ ಸುಪ್ರಭಾತ :ಹುಬ್ಬಳ್ಳಿಯ ವಿವಾದಿತ ದೇವಸ್ಥಾನದಲ್ಲಿಯೇ ಮೊದಲು ಸುಪ್ರಭಾತ ಮೊಳಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗ್ಗೆ 5 ಗಂಟೆಗೆ ಹಳೆ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನಕ್ಕೆ ಚಾಲನೆ ನೀಡಿದರು. ಕಳೆದ ತಿಂಗಳು ಹುಬ್ಬಳ್ಳಿ ಗಲಭೆಯ ವೇಳೆ ಈ ದೇವಸ್ಥಾನದ ಮೇಲೆ ದಾಳಿಯಾಗಿತ್ತು.