ಹುಬ್ಬಳ್ಳಿ:ಮೂರುಸಾವಿರ ಮಠದ ಆಸ್ತಿಯನ್ನು ಹೊಡೆಯಲು ಸಾಕಷ್ಟು ಜನರು ಹೊಂಚು ಹಾಕಿದ್ದಾರೆ. ಕೆಲವರು ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಅಲ್ಲದೇ ಕೆಎಲ್ಇ ಸಂಸ್ಥೆಯವರು ಕೂಡ ಕಾಲೇಜು ಕಟ್ಟಡಕ್ಕೆ ಮೂರು ಸಾವಿರ ಮಠದ ಆಸ್ತಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ಜೀವ ಇರುವವರೆಗೂ ಮೂರುಸಾವಿರ ಮಠದ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆ ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಕೆಎಲ್ಇ ಸಂಸ್ಥೆಯವರು ಮೂರುಸಾವಿರ ಮಠದ 24 ಎಕರೆ ಜಮೀನನ್ನು ಬಳಸಿಕೊಂಡು ಕಾಲೇಜು ಕಟ್ಟಿಸಲು ಮುಂದೆ ಬಂದಿದೆ. ಆದರೆ, ಕೆಎಲ್ಇ ಸಂಸ್ಥೆ ಬೆಳೆಯಬೇಕು. ಅದೇ ರೀತಿ ಮೂರುಸಾವಿರ ಮಠದ ಆಸ್ತಿಯೂ ಉಳಿಯಬೇಕು. ಈ ಹಿನ್ನೆಲೆಯಲ್ಲಿ ಕಾಲೇಜು ಕಟ್ಟಿಸಲು ಮೂರುಸಾವಿರ ಮಠದ ಜಾಗ ಬೇಡ ಎಂದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ಕಾಡಸಿದ್ದೇಶ್ವರ ಕಾಲೇಜು ಹಾಗೂ ಗಂಗಾಧರ ಕಾಲೇಜಿಗೆ ಮೂರುಸಾವಿರ ಮಠ ಜಾಗ ಕೊಟ್ಟಿದೆ. ಎಲ್ಲ ಕಾಲೇಜಿಗೂ ಜಾಗ ಕೊಡುವಷ್ಟು ಆರ್ಥಿಕವಾಗಿ ಸದೃಢವಾಗಿಲ್ಲ. ಒಂದು ವೇಳೆ ಮೆಡಿಕಲ್ ಕಾಲೇಜು ಕಟ್ಟಲೇಬೇಕು ಎಂದಾದರೆ ಮೂರುಸಾವಿರ ಮಠದ ಆಡಳಿತದ ಅಡಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಿ ಅದಕ್ಕೆ ನಮ್ಮ ಸ್ವಾಗತವಿದೆ ಎಂದು ಅವರು ಹೇಳಿದರು.