ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯಲ್ಲಿ ಖಾಸಗಿ ಬಸ್-ಲಾರಿ ಮಧ್ಯೆ ಭೀಕರ ಅಪಘಾತ: 8 ಮಂದಿ ದುರ್ಮರಣ

ಖಾಸಗಿ ಬಸ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ 8 ಜನರು ಮೃತಪಟ್ಟು, 26 ಜನರು ಗಾಯಗೊಂಡ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.

Hubli Accident
ಹುಬ್ಬಳ್ಳಿ ರಸ್ತೆ ಅಪಘಾತ

By

Published : May 24, 2022, 8:01 AM IST

Updated : May 24, 2022, 12:24 PM IST

ಹುಬ್ಬಳ್ಳಿ: ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಜನರು ಮೃತಪಟ್ಟ ಘಟನೆ ಹುಬ್ಬಳ್ಳಿ ತಾರಿಹಾಳ ಬಳಿ ನಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ 6 ಜನ ಸಾವನ್ನಪ್ಪಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಗಾಯಗೊಂಡ 26 ಜನರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.


ಮೃತರನ್ನು ಇಚಲಕರಂಜಿ ನಿವಾಸಿ ಬಾಬಾಸೋ ಚೌಗಲೆ (59), ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ನಾಗರಾಜ ಆಚಾರ್(56), ಬೆಂಗಳೂರಿನ ನಿವಾಸಿ ಬಸ್ ಚಾಲಕ ಅತಾವುಲ್ಲಾ ಖಾನ್(40), ಮಸ್ತಾನ್, ಮೈಸೂರು ನಿವಾಸಿ ಮಹಮ್ಮದ್ ದಯಾನ್‌ ಬೇಗ್(17), ಕೊಲ್ಹಾಪುರದ ನಿವಾಸಿಗಳಾದ ಅಕ್ಷಯ ದವರ್(28), ಅಕೀಫ್(40) ಹಾಗೂ ಅಫಾಕ್( 41) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯಾಷನಲ್‌ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿತ್ತು. ಮೃತರಲ್ಲಿ ಹೆಚ್ಚಿನವರು ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಪುಣೆಯವರು.‌ ಲಾರಿ ಚಾಲಕ, ಕ್ಲೀನರ್ ಹಾಗೂ ಬಸ್​​ನಲ್ಲಿದ್ದ 6 ಜನ ಸೇರಿ ಒಟ್ಟು 8 ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಕನಸಿನ ಗೋಪುರ ನೆಲಸಮ ಮಾಡಿದ ಅಪಘಾತ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ..!

ನ್ಯಾಷನಲ್ ಟ್ರಾವೆಲ್ಸ್​ನ KA 51 AA 7146 ನಂಬರ್ ಬಸ್ ಹಾಗೂ MH 16 AY 6916 ಲಾರಿ ಮಧ್ಯೆ ಅಪಘಾತ‌ ಉಂಟಾಗಿದೆ. ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಬಸ್‌ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‌ ಒಡೆತನದ ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದೆ. ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ.

ತುರ್ತು ಚಿಕಿತ್ಸಾ ಘಟಕಕ್ಕೆ ಕಿಮ್ಸ್ ನಿರ್ದೇಶಕ ಭೇಟಿ: ಹುಬ್ಬಳ್ಳಿಯ ಕಿಮ್ಸ್ ತುರ್ತು ಚಿಕಿತ್ಸಾ ಘಟಕಕ್ಕೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಬಳಿಕ ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ‌ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪಘಾತ ಪ್ರಕರಣದಲ್ಲಿ 8 ಜನ ಮೃತಪಟ್ಟಿದ್ದಾರೆ. 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರಿಗೆ ಚಿಕಿತ್ಸೆ ಮುಂದುವರೆದಿದೆ. ಐದಾರು ಜನರ ಸ್ಥಿತಿ ಚಿಂತಾಜನಕವಾಗಿದೆ. ಪ್ರಾಣಾಪಾಯದಿಂದ ಪಾರಾದ ಕೆಲವರು ಮಹಾರಾಷ್ಟ್ರಕ್ಕೆ ಮರಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.


ಹೆಚ್‌.ಡಿ.ಕುಮಾರಸ್ವಾಮಿ ಟ್ವೀಟ್:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ದುರಂತದಲ್ಲಿ ಅಸುನೀಗಿದವರೆಲ್ಲರಿಗೂ ಚಿರಶಾಂತಿ ಸಿಗಲಿ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಪದೇ ಪದೆ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಇದು 'ಸಾವಿನ ಹೆದ್ದಾರಿ'ಯಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಅಪಘಾತಗಳು ಸಂಭವಿಸದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Last Updated : May 24, 2022, 12:24 PM IST

ABOUT THE AUTHOR

...view details