ದಾವಣಗೆರೆ: ಅನ್ಲಾಕ್ 3.0 ಜಾರಿ ಮಾಡಲಾಗಿದ್ದರೂ ವ್ಯಾಪಾರೋದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಟೆಕ್ಸ್ಟೈಲ್, ಹೊಲಿಗೆ, ಹೋಟೆಲ್ ಸೇರಿದಂತೆ ಎಲ್ಲಾ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ವರ್ತಕರು ವ್ಯಾಪಾರಕ್ಕೆ ಮರಳಿದರೂ ವಹಿವಾಟು ಅಷ್ಟಕಷ್ಟೆ.
ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ ವಾಣಿಜ್ಯೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಬೆಣ್ಣೆದೋಸೆ, ಖಾರ, ಮಂಡಕ್ಕಿ, ಬಟ್ಟೆ ವ್ಯಾಪಾರ ಸೇರಿದಂತೆ ಇತರೆ ವ್ಯಾಪಾರವು ಕೊರೊನಾ ಬರುವುದಕ್ಕೂ ಮುನ್ನ ಉತ್ತಮವಾಗಿಯೇ ನಡೆಯುತ್ತಿತ್ತು. ಲಾಕ್ಡೌನ್ ಬಳಿಕ ಅದರ ವಾತಾವರಣವೇ ಬದಲಾಯಿತು. ಇದರಿಂದಾಗಿ ಶೇ.75ರಷ್ಟು ವಾಪಾರ ವಹಿವಾಟು ಕುಸಿದಿದೆ ಎನ್ನಲಾಗ್ತಿದೆ.
ಆನ್‌ಲೈನ್ ವ್ಯವಹಾರವೂ ಸ್ಥಗಿತ:
ಬೆಣ್ಣೆದೋಸೆ ರುಚಿ ಸವಿಯಲು ಬೇರೆ ಬೇರೆ ಜಿಲ್ಲೆಗಳಿಂದ ಜನರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ನಟ-ನಟಿಯರು ಬರುತ್ತಿದ್ದರು. ಆನ್‌ಲೈನ್ ಮೂಲಕವೂ ಬುಕ್ಕಿಂಗ್ ಜೋರು ನಡೆಯುತಿತ್ತು. ಕೋವಿಡ್-19 ಭೀತಿಯಿಂದಾಗಿ ಈಗ ಅದಕ್ಕೆ ಕೊಕ್ಕೆ ಬಿದ್ದಿದೆ.
ನಗರದ ಬಿ.ಎಸ್.ಚನ್ನಬಸಪ್ಪ, ಅಂಬಾರ್ಕರ್, ರವಿತೇಜ ಸೇರಿದಂತೆ ದೊಡ್ಡ ದೊಡ್ಡ ಟೆಕ್ಸ್ಟೈಲ್ಗಳಲ್ಲಿ ಜನ ಕಾಣಸಿಗುವುದೇ ವಿರಳ. ತೀರಾ ಅನಿವಾರ್ಯ ಇದ್ದರೆ ಮಾತ್ರ ಬಟ್ಟೆ ಖರೀದಿಸುತ್ತಿದ್ದಾರೆ. ಇನ್ನು ಹೊಲಿಗೆ ಅಂಗಡಿಗಳ ಗೋಳು ಹೇಳತೀರದು. 18 ಕಾರ್ಮಿಕರಿದ್ದ ಸ್ಥಳಗಳಲ್ಲಿ ಮೂವರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇವರಿಗೂ ಸಂಬಳ ಕೊಡಲು ಆಗದಂಥ ಸ್ಥಿತಿ ಬಂದೊದಗಿದೆ. ಇನ್ನೂ ಕೆಲ ದಿನ ಬೋಣಿಯೇ ಆಗದಿರುವ ಪರಿಸ್ಥಿತಿ ಕಾಣುತ್ತಿದೆ.
ಲಾಕ್ಡೌನ್ ನಂತರವೂ ವ್ಯಾಪಾರ ವಹಿವಾಟು ಕುಸಿತ ಒಂದೆಡೆ ವ್ಯಾಪಾರ ಇಲ್ಲ, ಮತ್ತೊಂದೆಡೆ ಉದ್ಯೋಗವಿಲ್ಲ. ಜನರ ಕೈಯಲ್ಲಿ ಹಣವೂ ಇಲ್ಲ. ಹಳ್ಳಿ ಜನರು ಸಿಟಿಯತ್ತ ಬರುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಹೆಚ್ಚುತ್ತಿರುವ ಕಾರಣ ನಗರಕ್ಕೆ ಬರುವವರು ಕಡಿಮೆ ಆಗುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಬಿಟ್ಟರೆ ಬೇರೆ ಯಾವ ಉದ್ಯಮವೂ ಅಷ್ಟಕಷ್ಟೆ. ನನ್ನ 30 ವರ್ಷದ ಹೊಲಿಗೆ ವೃತ್ತಿಯಲ್ಲಿ ಎಂದೂ ಇಂಥ ಸಂಕಷ್ಟ ಕಂಡಿರಲಿಲ್ಲ ಎನ್ನುತ್ತಾರೆ ರಾಜ್ಯ ಹೊಲಿಗೆ ನೌಕರರ ಅಧ್ಯಕ್ಷ ಕೆ.ಜಿ.ಯಲ್ಲಪ್ಪ.
ಗ್ಯಾರೇಜ್, ಆಟೋ ಮೊಬೈಲ್ ಅಂಗಡಿಗಳು ಇದಕ್ಕೆ ಹೊರತಾಗಿಲ್ಲ. ವಾಹನಗಳು ರಿಪೇರಿ ಇದ್ದರೂ ಮಾಡಿಸುತ್ತಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಕಾರಣ ಹೆಚ್ಚು ವಾಹನಗಳನ್ನು ಉಪಯೋಗಿಸುತ್ತಿಲ್ಲ. ಆದ ಕಾರಣ ನಮ್ಮ ವ್ಯಾಪಾರವೂ ಇಲ್ಲ. ಈಗಲೇ ಪರಿಸ್ಥಿತಿ ಹೀಗಾದರೆ ಮುಂದೆ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವರ್ತಕರು. ಈ ಎಲ್ಲಗಳ ನಡುವೆ ಭಾರಿ ಪ್ರಮಾಣದಲ್ಲಿ ಉದ್ಯೋಗ ಕುಸಿತವಾಗಿದೆ.