ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಹರಿಹರೇಶ್ವರ ದೇವಾಲಯವು ಜಗತ್ತಿನಾದ್ಯಂತ ಖ್ಯಾತಿ ಪಡೆದುಕೊಂಡಿದೆ. ಈ ದೇವಾಲಯದಿಂದಲೇ ಹರಿಹರ ತಾಲೂಕಿಗೆ ಹರಿಹರ ಎಂಬ ಹೆಸರು ಬಂತು ಎಂಬುದು ಇತಿಹಾಸಕಾರರ ವಾದ. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಈ ಐತಿಹಾಸಿಕ ದೇವಾಲಯ ಇಂದಿಗೂ ಹಿರಿಮೆಯನ್ನು ಹಾಗೆಯೇ ಉಳಿಸಿಕೊಂಡಿರುವುದು ವಿಶೇಷ.
ಹೌದು, ಇಷ್ಟೊಂದು ಸುಂದರವಾದ ಹರಿಹರೇಶ್ವರ ದೇವಸ್ಥಾನವನ್ನು 1224 ರಲ್ಲಿ ನಿರ್ಮಾಣ ಮಾಡಲಾಗಿದ್ದು, ಎಲ್ಲೂ ಕೂಡ ಹಾನಿಯಾಗದಂತೆ ಕಾಪಾಡಿಕೊಂಡು ಬರಲಾಗಿದೆ. ಈ ದೇವಾಲಯವನ್ನು ಹೊಯ್ಸಳ ಸಾಮ್ರಾಜ್ಯದ ಅಧಿಪತಿ 2 ನೇ ನರಸಿಂಹನ ದಂಡನಾಯಕ ಪೊಲ್ವಾಳನು ನಿರ್ಮಾಣ ಮಾಡಿದ್ದಾನೆ ಎಂದು ಇಲ್ಲಿರುವ ಶಾಸನಗಳು ಸಾರುತ್ತಿವೆ. ಕಲ್ಲಿನ ಕಂಬಗಳಿಂದ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ರಾಜ್ಯ, ಹೊರ ರಾಜ್ಯದ ಭಕ್ತರು ಭೇಟಿ ನೀಡಿ ದರ್ಶನ ಪಡೆದು ಹರಕೆಗಳನ್ನು ಹೊತ್ತು ಪುನೀತರಾಗುತ್ತಾರೆ.
ದೇವಾಲಯದ ಇತಿಹಾಸ:
ಹರಿಹರದ ಹರಿಹರೇಶ್ವರ ಧಾರ್ಮಿಕ ಕ್ಷೇತ್ರ ಕೆಲ ವರ್ಷಗಳ ಹಿಂದೆ ಗುಹಾರಣ್ಯ ಕ್ಷೇತ್ರವಾಗಿತ್ತಂತೆ. ಈ ಹರಿಹರ ಕ್ಷೇತ್ರದಲ್ಲಿ ವಾಸವಿದ್ದ ಗುಹಾಸುರ ಎಂಬ ರಾಕ್ಷಸನ ವಧೆಗಾಗಿ ಹರಿ ಮತ್ತು ಹರ ಇಬ್ಬರು ಸೇರಿ ಅ ರಾಕ್ಷಸನನ್ನು ಸಂಹಾರ ಮಾಡಿದರು ಎಂದು ಇತಿಹಾಸ ತಿಳಿಸುತ್ತಿದೆ. ಹರಿ ಮತ್ತು ಹರ ಇಬ್ಬರು ರಾಕ್ಷಸನ ವಿರುದ್ಧ ಸೆಣಸಾಟ ನಡೆಸಿ, ಗುಹಾಸುರ ರಾಕ್ಷಸನನ್ನು ಮಣಿಸಿ ಇಲ್ಲೇ ನೆಲೆಸಿದ್ದರು. ಅವರು ನೆಲೆಸಿದ್ದ ಸ್ಥಳ ದೇವಸ್ಥಾನವಾಗಿ ಮಾರ್ಪಾಡಾಗಿದೆ ಎನ್ನಲಾಗ್ತಿದೆ.
ಇಲ್ಲಿನ ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧ ಭಾಗದಿಂದ ಕೂಡಿರುವುದು ವಿಶೇಷ. ಏಳು ಅಡಿ ಎತ್ತರದ ಹರಿಹರ ಮೂರ್ತಿಗಳು ಹರಿಹರದಲ್ಲಿ ಬಿಟ್ಟರೆ ಮತ್ತೆ ಎಲ್ಲಿಯೂ ಕೂಡ ನೋಡಲು ಸಿಗುವುದಿಲ್ಲ.