ಬೆಂಗಳೂರು: ನಗರದ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ನೀಡಿದೆ.
ಜುಲೈ 1ರಿಂದ ಐದನೇ ತಾರೀಕಿನವರೆಗೆ ಮಳೆಯಾಗಲಿದೆ. ಹೀಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ ಮೂರನೇ ತಾರೀಕಿನಂದು ಅತಿ ಹೆಚ್ಚು ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞರಾದ ಸಿಎಸ್ ಪಾಟೀಲ್ ತಿಳಿಸಿದರು.
ಹವಾಮಾನ ಇಲಾಖೆಯ ತಜ್ಞರಿಂದ ಮಾಹಿತಿ ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ರಾಜ್ಯದ ಒಳನಾಡುಗಳಲ್ಲೂ ಮಳೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ ಎಂದರು.
ಪೂರ್ವ ಅರಬ್ಬೀ ಸಮುದ್ರದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಕರಾವಳಿ ಪ್ರದೇಶದಲ್ಲಿ ಟ್ರಫ್ (ಮೋಡ ಕವಿದ ವಾತಾವರಣ) ನಿರ್ಮಾಣವಾಗಿದೆ. ಅರಬ್ಬೀ ಸಮುದ್ರದ ಪಶ್ಚಿಮ ಭಾಗದಲ್ಲೂ ಮಳೆ ಸರ್ಕ್ಯುಲೇಷನ್ ಇರುವುದರಿಂದ, ಜುಲೈ ಐದರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದರು.