ಕರ್ನಾಟಕ

karnataka

ETV Bharat / city

ಯಲಹಂಕ ಪುಟ್ಟೇನಹಳ್ಳಿ ಕೆರೆ ಸಂರಕ್ಷಣೆ ಪಿಐಎಲ್ : ಸರ್ಕಾರದ ಆದೇಶ ತಿದ್ದುಪಡಿಗೆ ಹೈಕೋರ್ಟ್ ನಿರ್ದೇಶನ

ಕೆರೆ ನಿರ್ವಹಣೆಗೆ ರಕ್ಷಿತ ಜಲಾಶಯ ನಿರ್ವಹಣಾ ಸಮಿತಿಯನ್ನು ಮರು ರಚನೆ ಮಾಡಲು ಆಗಸ್ಟ್ 24ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಸರ್ಕಾರ ತನ್ನ ಆದೇಶದಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಡಿಸಿಎಫ್ ಅಥವಾ ಎಸಿಎಫ್ ಯಾರಾದರೊಬ್ಬರು ಇರಬಹುದು ಎಂದು ತಿಳಿಸಿದೆ..

By

Published : Sep 1, 2020, 8:24 PM IST

Yelahanka Puttenahalli Lake Conservation PIL  High Court directive to amend government order
ಹೈಕೋರ್ಟ್ ನಿರ್ದೇಶನ

ಬೆಂಗಳೂರು :ಪಕ್ಷಿ ಸಂರಕ್ಷಿತ ವಲಯ ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಗೆ ರೂಪಿಸಿರುವ ರಕ್ಷಿತ ಜಲಾಶಯ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಡಿಸಿಎಫ್ ಅಥವಾ ಎಸಿಎಫ್ ಅವರಲ್ಲಿ ಒಬ್ಬರನ್ನು ನಿಯೋಜಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಯಲಹಂಕ ಪುಟ್ಟೇನಹಳ್ಳಿ ಕೆರೆ-ಪಕ್ಷಿ ಸಂರಕ್ಷಣಾ ಟ್ರಸ್ಟ್ ಮತ್ತು ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ಕೆರೆ ನಿರ್ವಹಣೆಗೆ ರಕ್ಷಿತ ಜಲಾಶಯ ನಿರ್ವಹಣಾ ಸಮಿತಿಯನ್ನು ಮರು ರಚನೆ ಮಾಡಲು ಆಗಸ್ಟ್ 24ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಸರ್ಕಾರ ತನ್ನ ಆದೇಶದಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಡಿಸಿಎಫ್ ಅಥವಾ ಎಸಿಎಫ್ ಯಾರಾದರೊಬ್ಬರು ಇರಬಹುದು ಎಂದು ತಿಳಿಸಿದೆ. ಇದು ಸರಿಯಾದ ಕ್ರಮವಲ್ಲ. ಇಬ್ಬರಲ್ಲಿ ಒಬ್ಬರು ಮಾತ್ರ ಇರುವುದು, ಅದರಲ್ಲೂ ಡಿಸಿಎಫ್ ಇರುವುದು ಸೂಕ್ತ ಎಂದರು.

ಇದಕ್ಕೆ ಪ್ರತಿಕ್ರಿಯಿಸಿ ಸರ್ಕಾರಿ ವಕೀಲರಿಗೆ ಸೂಚನೆ ನೀಡಿದ ಪೀಠ, ಸಮಿತಿಯಲ್ಲಿ ಡಿಸಿಎಫ್ ಅಥವಾ ಎಸಿಎಫ್ ಇಬ್ಬರಲ್ಲಿ ಒಬ್ಬರಿರುವುದು ಉತ್ತಮ. ಹೀಗಾಗಿ ಸರ್ಕಾರದ ಆದೇಶವನ್ನು ತಿದ್ದಪಡಿ ಮಾಡಿ ಎಂದು ತಿಳಿಸಿತು. ಹಾಗೆಯೇ, ಸಮಿತಿಯ ಕಾರ್ಯ ನಿರ್ವಹಣೆ ಕುರಿತ ಮಾಹಿತಿಯನ್ನು ಸದಸ್ಯ ಕಾರ್ಯದರ್ಶಿ ವರದಿ ಸಲ್ಲಿಸಬೇಕು. ಸೆಪ್ಟೆಂಬರ್ 30ರವರೆಗೆ ಸಮಿತಿ ನಡೆಸಿದ ಸಭೆಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ :ಯಲಹಂಕದ ಪುಟ್ಟೇನಹಳ್ಳಿ ಕೆರೆ ಪ್ರದೇಶದಲ್ಲಿ 175ಕ್ಕೂ ಅಧಿಕ ಪ್ರಭೇದದ ಪಕ್ಷಿ ಸಂಕುಲವಿದೆ. ಈ ಪ್ರದೇಶವನ್ನು ಪಕ್ಷಿ ಸಂರಕ್ಷಿತ ವಲಯವೆಂದು ಘೋಷಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ 2015ರ ಸೆ.10ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದ್ದರು. ಆದರೆ, ಈ ಕೆರೆಯನ್ನು 2019ರ ಡಿ.11ರಂದು ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಿ ನಗರಾಭಿವೃದ್ಧಿ ಇಲಾಖೆಗೆ ಆದೇಶ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ABOUT THE AUTHOR

...view details