ಬೆಂಗಳೂರು: ಮಹಿಳೆ ಹುಟ್ಟಿನಿಂದಲೇ ಸಾಧಕಿ. ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪುರುಷರಷ್ಟೇ ಸಮಾನ ಎಂದು ನಿರೂಪಿಸಿದ್ದಾಳೆ. ಸಮಾಜದಲ್ಲಿ ಹೆಣ್ಣು ತಾಯಿ, ತಂಗಿ, ಅಕ್ಕ, ಹೆಂಡತಿಯಾಗಿ ಕುಟುಂಬದ ಜವಾಬ್ದಾರಿ ಜೊತೆ ಸಮಾಜದ ಚಿಂತನೆ ಮಾಡುತ್ತಾಳೆ ಎಂದು ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟರು.
ಕರ್ನಾಟಕ ಮಹಿಳಾ ಅಚೀವರ್ಸ್ ಅವಾರ್ಡ್ಸ್ - 2021ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಹಿಳಾ ಸಾಧಕಿಯರಿಗೆ ಭಾನುವಾರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭವನ್ನು ದೀಪ ಬೆಳಗಿಸಿ ಸುಮಲತಾ ಅಂಬರೀಶ್ ಉದ್ಘಾಟನೆ ಮಾಡಿದರು. ಈ ವೇಳೆ ಗೌರವ ಅತಿಥಿಗಳಾಗಿ ಐಎಎಸ್ ಡಾ. ವಿಶಾಲ್ ರವಿ, ರಾಜಕುಮಾರಿ ಕಾಮಾಕ್ಷಿ ದೇವಿ, ಡಾ. ಸಿ ವಿನೋದ್ ಹಯಗ್ರೀವ್, ಸ್ಪೂರ್ತಿ ವಿಶ್ವಾಸ್, ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.
ಕರ್ನಾಟಕ ಮಹಿಳಾ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ದೊರಕಿರುವುದು ಸಂತೋಷಕರ ವಿಷಯ. ಅವರ ಪ್ರಶಸ್ತಿ ಇನ್ನೊಬ್ಬ ಮಹಿಳೆಗೆ ಪ್ರೇರಣೆ, ಸ್ಪೂರ್ತಿಯಾಗಲಿ ಎಂದು ಹೇಳಿದರು. ನಂತರ 20 ಮಹಿಳಾ ಸಾಧಕಿಯರ ಜೀವನ ಚರಿತ್ರೆ ಪುಸ್ತಕವನ್ನು ಅವರು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ನಟಿ ಸ್ಪೂರ್ತಿ ವಿಶ್ವಾಸ್, ಈ ದಿನಕ್ಕಾಗಿ ನಾನು ಕಾಯುತ್ತಿರುತ್ತೇನೆ. ವಿಜೇತರ ಮುಖದಲ್ಲಿ ಕಾಣುವ ಸಂತೋಷಕ್ಕೆ ನಾವು ಸಾಕ್ಷಿಯಾಗಲು ಕಾಯುತ್ತೇವೆ. ಮಾನದಂಡಗಳು ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಅಂತ ಹೇಳಿದರು.
18 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಪ್ರಮುಖ ಸಾಧಕರನ್ನು ಗುರುತಿಸಿತು ಮತ್ತು ಯಾವುದೇ ಪಕ್ಷಪಾತವಿಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಿಂದ ಮಹಿಳೆಯನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಮಾಡಿದೆ. ವಯಸ್ಸು, ವರ್ಗ, ಜಾತಿ ಅಥವಾ ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬ ಮಹಿಳೆಯನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿ ಸಮಾರಂಭದ ಏಕೈಕ ಗುರಿಯಾಗಿದೆ.