ಬೆಂಗಳೂರು: ಸೇಡಂ ವಿಧಾನಸಭಾ ಕ್ಷೇತ್ರದ ಶಾಸಕರಿಂದ ನನಗೆ ಮಗು ಜನಿಸಿದ್ದು, ಜೀವನಾಂಶ ಕೋರಿ ಹಣ ಕೇಳಿದ್ದೇನೆಯೇ ಹೊರತು ಬೇರೇನಿಲ್ಲ, ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.
ವಕೀಲ ಜಗದೀಶ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂತ್ರಸ್ತೆ, ನಾನು ನ್ಯಾಯ ಕೇಳುತ್ತಿದ್ದೇನೆ, ನಿನ್ನೆ ಬೆಳಗ್ಗೆ ಏಳು ಗಂಟೆಗೆ ಎಂಟು ಜನ ಪೊಲೀಸರು ಫ್ಲ್ಯಾಟ್ಗೆ ಬಂದಿದ್ದರು. ನಿನ್ನೆ ಏಳೂವರೆಯಿಂದ ರಾತ್ರಿ 9 ವರೆವರೆಗೆ ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ಹಾಗೂ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ.
ಇದರಿಂದಾಗಿ ಮನೆಯಲ್ಲಿ ಮೂವರು ಮಕ್ಕಳು ಹಸಿವಿನಿಂದ ಇರುವಂತಾಯಿತು. ಶಾಸಕರು ನನಗೆ ಬಾಲ್ಯದಿಂದಲೂ ಪರಿಚಯ. ನನ್ನ ಮಗನನ್ನು ಶಾಸಕರು ಅವರದ್ದೇ ಮಗ ಎಂದು ಒಪ್ಪಿಕೊಂಡಿದ್ದರು. ಶಾಸಕರನ್ನು ನನ್ನ ಮುಂದೆ ಕೂರಿಸಿ, ಆವಾಗ ನಾನು ಮಾತನಾಡುತ್ತೇನೆ. ನನ್ನ ಮಗುವಲ್ಲ ಅಂತಾ ಶಾಸಕರು ಮನೆ ದೇವರ ಮೇಲೆ ಆಣೆ ಮಾಡಲಿ. ಅವರ ಬಳಿ ದುಡ್ಡು ಕೇಳಿಲ್ಲ, ನನ್ನ ಮಗನಿಗೆ ಹಕ್ಕು ಕೊಡಿ ಎಂದು ಕೇಳಿದ್ದೇನೆ ಎಂದು ಮಹಿಳೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಚಾರಣೆ ವೇಳೆ ಸಂತ್ರಸ್ರೆ ಹೇಳಿದ್ದೇನು?: ಪೊಲೀಸ್ ವಿಚಾರಣೆ ವೇಳೆ ಶಾಸಕರ ವಿರುದ್ಧ ಮಹಿಳೆ ಆರೋಪ ಮಾಡಿದ್ದು, ತನ್ನ 14 ವರ್ಷದ ಮೊದಲ ಮಗ ಶಾಸಕರಿಂದಾಗಿಯೇ ಜನಿಸಿದ್ದಾನೆ. ಮಗುವಿಗೆ ಜೀವನಾಂಶ ಕೊಡಿ ಎಂದು ಕೇಳಿದ್ದೇನೆಯೇ ಹೊರತು ಬೇರೇನೂ ಕೇಳಿಲ್ಲ. ಮಗುವಿನ ಜೀವನಕ್ಕೆ ಬೇಕಿರುವುದನ್ನ ಕೊಡಿ ಎಂದು ಹಕ್ಕೊತ್ತಾಯ ಮಾಡಿದ್ದಾರೆ.