ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ ಮೇಲೆ ಇದೀಗ ರಾಜ್ಯ ಸರ್ಕಾರವೂ ತೆರಿಗೆ ಕಡಿತಗೊಳಿಸುವ ಅನಿವಾರ್ಯತೆಗೆ ಒಳಗಾಗಿದೆ. ಸದ್ಯದ ಆರ್ಥಿಕ ಸ್ಥಿತಿ ನೋಡಿದರೆ ರಾಜ್ಯದಲ್ಲಿ ಸುಂಕ ಕಡಿತಕ್ಕೆ ಪೂರಕ ವಾತಾವರಣವಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ನಿಟ್ಟಿನಲ್ಲಿ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಹಾರಾಷ್ಟ್ರ, ಕೇರಳ ತೈಲದ ಮೇಲಿನ ಸುಂಕ ಕಡಿತಗೊಳಿಸಿವೆ.
ಚುನಾವಣೆ ಹಿನ್ನೆಲೆಯಲ್ಲಿ ತೈಲ ಮೇಲಿನ ಸುಂಕ ಕಡಿತದಿಂದ ರಾಜಕೀಯ ಲಾಭವಾಗುವುದರ ಜೊತೆಗೆ ರಾಜ್ಯದಲ್ಲಿನ ಹಣದುಬ್ಬರ ಇಳಿಸಿ, ಜನರ ಹೊರೆ ತಗ್ಗಿಸುವ ಇರಾದೆಯೂ ಬೊಮ್ಮಾಯಿ ಸರ್ಕಾರದ್ದಾಗಿದೆ. ರಾಜ್ಯದ ಆರ್ಥಿಕ ಸ್ಥಿತಿಗತಿ ನೋಡಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದು, ಮುಂದಿನ ತಿಂಗಳು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್ನಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.35 ರಿಂದ ಶೇ.25.9ಕ್ಕೆ ಇಳಿಕೆ ಮಾಡಿದ್ದರೆ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.24ರಿಂದ ಶೇ.14.34ಕ್ಕೆ ಕಡಿತ ಮಾಡಿತ್ತು. ತೆರಿಗೆ ಕಡಿತಗೊಳಿಸಿ ಬೆಲೆ ಕಡಿತವಾದರೆ ತೈಲ ಬಳಕೆ ಹೆಚ್ಚಾಗಿ ಆದಾಯದಲ್ಲಿ ಏರಿಕೆ ಕಾಣಲಿದೆ. ಈ ಹಿಂದೆ ತೆರಿಗೆ ಕಡಿತವಾದಾಗಲೂ ತೈಲ ಬಳಕೆಯಲ್ಲಿ ಗಣನೀಯ ಏರಿಕೆ ಕಂಡಿತ್ತು. ಆದಾಯದಲ್ಲೂ ಏರಿಕೆಯಾಗಿತ್ತು. ಈ ಅಂಶವನ್ನು ಪರಿಗಣಿಸಿ ತೆರಿಗೆ ಕಡಿತಗೊಳಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.