ಬೆಂಗಳೂರು: ಗಾಮೀಣ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಇಂದು ಪ್ರಸ್ತಾಪಿಸಿದರು. ನಮ್ಮದು ಕಾಡಲ್ಲ, ಗುಡ್ಡಗಳಿವೆ. ಆದರೆ ಇಲ್ಲಿ ವನ್ಯ ಪ್ರಾಣಿಗಳಿದ್ದು, ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದರು.
ನಾಡಿನತ್ತ ಬರುವ ಕಾಡು ಪ್ರಾಣಿಗಳ ತಡೆಗೆ ಜೆಡಿಎಸ್ ಶಾಸಕರ ಒತ್ತಾಯ ಬಯಲು ಪ್ರದೇಶ, ಗುಡ್ಡಗಳಲ್ಲಿ ವಾಸವಾಗಿರುವ ವನ್ಯ ಪ್ರಾಣಿಗಳನ್ನು ಆಹಾರ ಒದಗಿಸದಿದ್ದರೆ ನಾವು ಸಾಕು ಪ್ರಾಣಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಬಯಲು ಸೀಮೆಯಲ್ಲಿ ಏಕಾಏಕಿ ಪ್ರಾಣಿಗಳು ದಾಳಿ ಮಾಡುತ್ತವೆ. ಆಹಾರ ಇಲ್ಲದಿದ್ದಾಗ ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ತವೆ. ಮೇಕೆ, ದನಗಳನ್ನು ಗುಡ್ಡಗಳಲ್ಲಿ ಮೇಯಿಸಲು ಜನ ಹಿಂದೇಟು ಹಾಕುತ್ತಾರೆ. ಚಿರತೆ ಸೇರಿ ಕಾಡು ಪ್ರಾಣಿಗಳು ಬಂದಿವೆ. ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ಆಹಾರ ಉತ್ಪತಿ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ: ಕತ್ತಿ ಭರವಸೆ
ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ, ಹಾಸನ ಜಿಲ್ಲೆಯಲ್ಲಿ ಚಿರತೆ, ಆನೆ, ಹುಲಿ ಎಲ್ಲಾ ಪ್ರಾಣಿಗಳು ಹೆಚ್ಚಿವೆ ಎಂದರು. ಇದಕ್ಕೆ ಮತ್ತೆ ಎದ್ದು ನಿಂತ ನಮ್ಮ ಹಾಸನ ಜಿಲ್ಲೆ ಅಲ್ಲ, ಹಾಸನ ಜಿಲ್ಲೆಯ ಸಕಲೇಶಪುರ ಕಾಡು, ನಮ್ಮದು ಬಯಲು ಸೀಮೆ ಅರಸೀಕರೆ ಎಂದರು ಶಾಸಕ ಶಿವಲಿಂಗೇಗೌಡರು. ಇದಾದ ಮೇಲೆ ಮತ್ತೆ ಮಾತು ಮುಂದುವರಿಸಿದ ಉಮೇಶ್ ಕತ್ತಿ, ಆನೆ, ಹುಲಿ, ಚಿರತೆ ಹಾಗೂ ಮಂಗನ ಹಾವಳಿ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಗೆ ಹೋಗಿ ನಾವೇ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸರಿಯಾದ ಪರಿಹಾರ ಕಲ್ಪಿಸುವುದಾಗಿ ಹೇಳಿದರು.
ಇದು ಹಾಸನ ಅಷ್ಟೇ ಅಲ್ಲ ಎಲ್ಲ ಕಡೆ ಇದೆ: ಸ್ಪೀಕರ್
ಈ ವೇಳೆ ಮಧ್ಯಪ್ರವೇಶಿದ ಸ್ಪೀಕರ್, ಉಮೇಶ್ ಕತ್ತಿಯವರೇ ನೀವು ಹಾಸನಕ್ಕೆ ಮಾತ್ರ ಅಲ್ಲ, ಎಲ್ಲ ಜಿಲ್ಲೆಗಳಿಗೂ ಹೋಗಬೇಕು. ನಮ್ಮ ಜಿಲ್ಲೆಗೂ ಬರಬೇಕು. ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಸ್ಯೆ ದೊಡ್ಡದು ಇದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಹಾಸನದಲ್ಲಿ ಮಾತ್ರವಲ್ಲದೇ, ಸ್ಥಳಕ್ಕೆ ಹೋಗಿ ಬಂದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ರಾಮನಗರದಲ್ಲೂ ಈ ಸಮಸ್ಯೆ ಇದೆ. ರೈತರು ಬಾಳೆ, ರಾಗಿ ಬೆಳೆಗೆ ಆನೆಗಳು ದಾಳಿ ಮಾಡುತ್ತವೆ. ಆನೆಗಳು ಹಳ್ಳಿಗಳು, ಹೊಲಗಳಿಗೆ ಬಾರದ ರೀತಿ ತಡೆ ಗೋಡೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.