ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಪದೇ ಪದೇ ಜೈಲಿಗೆ ಹೋಗಿಬಂದರೂ ಬುದ್ಧಿ ಕಲಿಯದ ಚೋರನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಗಾರಪೇಟೆ ಮೂಲದ ಸಯ್ಯದ್ ಅಜ್ಮದ್ ಬಂಧಿತ. ಈತನಿಂದ ₹2 ಲಕ್ಷ ಮೌಲ್ಯದ 407 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಫಿಂಗರ್‌ಪ್ರಿಂಟ್ ಆಧಾರದ ಮೇಲೆ ಖದೀಮ ಅರೆಸ್ಟ್:
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಮನೆಯೊಂದರಲ್ಲಿ ನಾಗರತ್ನಮ್ಮ ಎಂಬುವವರು ವಾಸವಾಗಿದ್ದರು. ಕಳೆದ ತಿಂಗಳು (ಅ.26) ಮಗನ ಜೊತೆ ತರಕಾರಿ ತರಲು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಈ ವೇಳೆ ಹಾಡಹಾಗಲೇ ಮನೆಗೆ ನುಗ್ಗಿದ ಸಯ್ಯದ್ ಅಜ್ಮದ್, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ಸಬ್ ಇನ್ಸ್ಪೆಕ್ಟರ್ ಸಂಗಬಸಪ್ಪ ರಬಕವಿ ನೇತೃತ್ವದ ತಂಡ ಫಿಂಗರ್ ಪ್ರಿಂಟ್ ಸುಳಿವಿನಿಂದ ಹಾಗೂ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯ ಹೆಡೆಮುರಿಕಟ್ಟಿದ್ದಾರೆ.