ಬೆಂಗಳೂರು: ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಯಮ ಪಾಲಿಸದೆ ತಲೆ ಎತ್ತಿದ್ದ 14 ವಾಣಿಜ್ಯ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆ
ಬೆಸ್ಕಾಂ ಮೂಲಕ ವಿದ್ಯುತ್ ಕಡಿತಗೊಳಿಸಿದೆ.
ರಾಜಧಾನಿಗೆ ವಲಸೆ ಬರುವವರ ಪ್ರಮಾಣ ಹೆಚ್ಚಾದಂತೆ ನಗರದಲ್ಲಿ ಗಗನಚುಂಬಿ ಕಟ್ಟಡಗಳ ಸಂಖ್ಯೆ ಅಧಿಕವಾಗುತ್ತಲೇ ಇವೆ. ಪ್ರತಿಷ್ಠಿತ ಹೊಟೇಲ್, ಅಪಾರ್ಟ್ಮೆಂಟ್, ಮಾಲ್ಗಳು ಹೀಗೆ ಬಹುಮಹಡಿ ಕಟ್ಟಡಗಳಾಗಿ ರೂಪಾಂತರಗೊಂಡಿವೆ. ಹೀಗೆ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡಗಳನ್ನು ತಲೆ ಎತ್ತುವಂತೆ ಮಾಡುವ ಮಾಲೀಕರು ಸುರಕ್ಷಿತ ಕ್ರಮಗಳನ್ನು ಅನುಸರಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಗ್ನಿಶಾಮಕದಳವು, ನಿಯಮ ಮೀರಿ ತಲೆ ಎತ್ತಿದ್ದ 14 ವಾಣಿಜ್ಯ ಕಟ್ಟಡಗಳ ವಿದ್ಯುತ್ ಕಡಿತಗೊಳಿಸಿದೆ.
ಇಂದಿರಾ ನಗರದ ಗ್ಲೋಬಲ್ ಹೋಮ್, ಶ್ರೀರಾನ್ ನಿವಾಸ್, ಮಾರ್ಕ್ ಸ್ವ್ಕೇರ್, ಸ್ಟೋರ್ಸ್ ಗ್ಲೋಬಲ್ ಸೇರಿದಂತೆ ಹೊಟೇಲ್, ಕ್ಲಬ್ ಹಾಗೂ ಪಬ್ಗಳಿಗೆ ಬೆಸ್ಕಾಂ ವಿದ್ಯುತ್ ಕಡಿತಗೊಳಿಸಲಾಗಿದೆ.
ಅಗ್ನಿಶಾಮಕ ಇಲಾಖೆಯ ನಿಯಮದಂತೆ ಸುರಕ್ಷಿತ ಸಾಧನ ಅಳವಡಿಸಿಕೊಳ್ಳದ ಕಟ್ಟಡದ ಮಾಲೀಕರಿಗೆ ನಿಯಮ ಪಾಲಿಸುವಂತೆ ಅಗ್ನಿಶಾಮಕ ಇಲಾಖೆ ನೋಟಿಸ್ ನೀಡಿತ್ತು. ಗಡುವು ಮುಗಿದರೂ ಎಚ್ಚೆತ್ತುಕೊಳ್ಳದ ಪರಿಣಾಮ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯುತ್ ಕಡಿತಗೊಳಿಸುವಂತೆ ಬೆಸ್ಕಾಂಗೆ ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಸುನೀಲ್ ಅಗರವಾಲ್ ತಿಂಗಳ ಮುಂಚೆಯೇ ಪತ್ರ ಬರೆದಿದ್ದರು.
ಇದರಂತೆ ಬೆಸ್ಕಾಂ ಅಧಿಕಾರಿಗಳು 14 ಕಟ್ಟಡಗಳಿಗೆ ವಿದ್ಯುತ್ ಕಡಿತಗೊಳಿಸಿದ್ದಾರೆ. ಒಂದು ವೇಳೆ ಮತ್ತೆ ಅಗ್ನಿಸುರಕ್ಷಾ ಕ್ರಮಗಳನ್ನು ಅನುಸರಿಸದಿದ್ದರೆ ಬಿಬಿಎಂಪಿಗೆ ಪತ್ರ ಬರೆದು ಸ್ವಾಧೀನಾನುಭವ ಪತ್ರ (ಒಸಿ) ರದ್ದುಗೊಳಿಸಲಾಗುವುದು ಎಂದು ಸುನೀಲ್ ಅಗರವಾಲ್ ತಿಳಿಸಿದ್ದಾರೆ.