ಬೆಂಗಳೂರು :ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ ಅಸಾನಿ ಚಂಡಮಾರುತವಾಗಿ ರೂಪುಗೊಂಡಿದೆ. ಗಾಳಿಯು ಆಗ್ನೇಯದಿಂದ ವಾಯವ್ಯದ ಕಡೆಗೆ ಗಂಟೆಗೆ 110 ಕಿ.ಮೀ ವೇಗದಲ್ಲಿ ರಭಸದಿಂದ ಬೀಸುತ್ತಿದೆ. ಮುಂದಿನ 24 ತಾಸಿನಲ್ಲಿ ಮಳೆ ಮತ್ತಷ್ಟು ಬಿರುಸುಗೊಳ್ಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಚಂಡಮಾರುತ ಪರಿಣಾಮ ಕರ್ನಾಟಕದಲ್ಲಿ ಉತ್ತಮ ವರ್ಷಧಾರೆಯಾಗಲಿದೆ. ಯಾದಗಿರಿ, ರಾಯಚೂರು ಮತ್ತು ವಿಜಯಪುರ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ನಗರದಲ್ಲಿ ಭಾನುವಾರ ಸುರಿದ ಭಾರಿ ಮಳೆ :ನಗರದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಯಿಂದಾಗಿ 40ಕ್ಕೂ ಅಧಿಕ ಮರಗಳು ಹಾಗೂ ಎಹೆಚ್‌ಎಸ್‌ಆರ್ ಬಡಾವಣೆಯಲ್ಲಿ ಎರಡು ತಿಂಗಳ ಹಿಂದೆ ಉದ್ಘಾಟಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಛಾವಣಿ ಮುರಿದು ಬಿದ್ದಿರುವುದು ಬೆಳಕಿಗೆ ಬಂದಿದೆ.
40ಕ್ಕೂ ಅಧಿಕ ಮರಗಳು ಧರೆಗೆ :ದೊಡ್ಡ ಕಲ್ಲಸಂದ್ರ, ದೊಡ್ಡಆಲದ ಮರ ಸೇರಿ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ. ಬೆಳಗ್ಗೆಯಿಂದ ಬಿಸಿಲು ಹಾಗೂ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಸಂಜೆಯಾಗುತ್ತಿದ್ದಂತೆ ಮಳೆ ಆರಂಭವಾಯಿತು. ಮಳೆಯ ಜತೆಗೆ ಬಿರುಗಾಳಿ ಬೀಸಿದ್ದರಿಂದ 40ಕ್ಕೂ ಅಧಿಕ ಮರಗಳು ಬುಡ ಸಮೇತ ಬಿದ್ದಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣ ಹಾನಿ ಆಗಿಲ್ಲ:ಬೊಮ್ಮನಹಳ್ಳಿ ವಲಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಗಾಳಿ ಹೆಚ್ಚಾಗಿದ್ದರಿಂದ ನಗರ, ಕೋಣನಕುಂಟೆ, ಬಿಳೇಕಹಳ್ಳಿ, ಬನ್ನೇರುಘಟ್ಟ ಮುಖ್ಯರಸ್ತೆ, ಅಗರ, ವಿಜಯಾ ಬ್ಯಾಂಕ್ ಲೇಔಟ್, ಹುಳಿಮಾವು ಟೀಚರ್ ಕಾಲೋನಿ, ವೈಟ್‌ಫೀಲ್ಡ್ ಸೇರಿ ವಿವಿಧೆಡೆ 5 ಮರಗಳು ಬಿದ್ದಿವೆ. ಆದರೆ, ಪ್ರಾಣಹಾನಿ ಆಗಿರುವುದು ವರದಿಯಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಎಸ್‌ಆರ್ ಬಡಾವಣೆ, ಆರ್‌ಬಿಐಲೇಔಟ್, ಜೆಪಿನಗರ, ಕೋರಮಂಗಲ, ಜಕ್ಕಸಂದ್ರ, ಕುಮಾರಸ್ವಾಮಿ ಲೇಔಟ್ ಪ್ರದೇಶಗಳಲ್ಲಿ 33ಕ್ಕೂ ಅಧಿಕ ಮರಗಳು ಉರುಳಿವೆ.
2 ತಿಂಗಳಲ್ಲಿಯೇ ಮುರಿದುಬಿದ್ದ ಮೇಲ್ಛಾವಣಿ :ಹೆಚ್ಎಸ್‌ಆರ್ ಬಡಾವಣಿಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಸುತ್ತಲೂ ವೀಕ್ಷಕರ ಗ್ಯಾಲರಿ ನಿರ್ಮಿಸಿ ಅದರ ಮೇಲೆ ಶೀಟ್ಗಳ ಛಾವಣಿ ಹಾಕಲಾಗಿತ್ತು. ಈ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 1ರಂದು ಉದ್ಘಾಟಿಸಿ ವಾಜಪೇಯಿ ಅವರ ಹೆಸರು ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದ್ದರು.
ಕಳಪೆ ಕಾಮಗಾರಿ ಆರೋಪ :ಆದರೆ, ಭಾನುವಾರ ಸುರಿದ ಗಾಳಿ ಮಳೆಗೆ ಕಂಬಗಳ ಸಮೇತವಾಗಿ ಶೀಟ್ ಮುರಿದು ಬಿದ್ದಿದೆ. ಇಲ್ಲಿ ಕಳಪೆ ಕಾಮಗಾರಿ ಮಾಡಿರುವುದೇ ಮುರಿದು ಬೀಳಲು ಕಾರಣವಾಗಿದೆ. ಬಾಕಿ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿರುವ ಕಾಮಗಾರಿ ನಿಲ್ಲಿಸಬೇಕು. ತಜ್ಞರಿಂದ ಕಾಮಗಾರಿ ಗುಣಮಟ್ಟದ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮೇ 10 ರಂದು ಸೈಕ್ಲೋನ್ ಒಡಿಶಾ ಅಪ್ಪಳಿಸುವ ಸಾಧ್ಯತೆ