ಕರ್ನಾಟಕ

karnataka

ETV Bharat / city

ಪಶುಸಂಗೋಪನಾ ಇಲಾಖೆಯಿಂದ ಬೇರೆ ಇಲಾಖೆಗೆ ಸಿಬ್ಬಂದಿ ನಿಯೋಜನೆ ಮಾಡುವ ಪ್ರಕ್ರಿಯೆಗೆ ಬ್ರೇಕ್ - stopped the process of assigning Animal Husbandry staff to a different department

ಇನ್ನು ಮುಂದೆ ಪಶುಸಂಗೋಪನಾ ಇಲಾಖೆ ಸಿಬ್ಬಂದಿಯನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿ ಆದೇಶಿಸಿರುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

Animal Husbandry
ಪ್ರಭು ಚವ್ಹಾಣ್

By

Published : Jul 9, 2021, 10:41 PM IST

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷ ಶಾಸಕರ ಒತ್ತಾಯಕ್ಕೆ ಕಡೆಗೂ ಸರ್ಕಾರ ಮಣಿದಿದ್ದು, ಪಶುಸಂಗೋಪನಾ ಇಲಾಖೆಯಿಂದ ಬೇರೆ ಇಲಾಖೆಗೆ ಸಿಬ್ಬಂದಿ ನಿಯೋಜನೆ ಮಾಡುವ ಪ್ರಕ್ರಿಯೆಗೆ ಬ್ರೇಕ್ ಹಾಕಿ ಆದೇಶಿಸಿದೆ. ಇಲಾಖೆ ಸಿಬ್ಬಂದಿ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸಬೇಕು ಹಾಗು ಬೇರೆ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಸಿಬ್ಬಂದಿ ತಿಂಗಳಾಂತ್ಯಕ್ಕೆ ವಾಪಸ್ ಮರಳುವಂತೆ ಸೂಚಿಸಿದೆ.

ಪ್ರತಿ ಬಾರಿ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಹಾಗೂ ಆಡಳಿತ ಪಕ್ಷದ ಸದಸ್ಯರಿಂದ ಪಶುವೈದ್ಯರ ಕೊರತೆ ಕುರಿತು ಚರ್ಚೆ ನಡೆಯುತ್ತಲೇ ಇದೆ. ಪಕ್ಷಾತೀತವಾಗಿ ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಸಹ ಪತ್ರದ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದ್ದರು.ಇದರ ಜೊತೆಗೆ ಈ ಕುರಿತು ಮುಖ್ಯಮಂತ್ರಿಗಳು ಪತ್ರದ ಮೂಲಕ ಸೂಚನೆ ನೀಡಿದ್ದು, ಅದರಂತೆ ಸಿಬ್ಬಂದಿ ಕೊರತೆ ತಡೆಗೆ ಇಲಾಖೆ ಸಿಬ್ಬಂದಿಯನ್ನು ಅನ್ಯ ಕರ್ತವ್ಯದ ನಿಯೋಜನೆಗೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿರುವ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಅನ್ಯ ಇಲಾಖೆಗೆ ನಿಯೋಜನೆಗೊಂಡ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಜುಲೈ 31ರ ಒಳಗೆ ವಾಪಸ್ ಪಡೆಯಲು ನಿರ್ಧರಿಸಲಾಗಿದ್ದು, ಇನ್ನು ಮುಂದೆ ಪಶುಸಂಗೋಪನೆಯಿಂದ ಸಿಬ್ಬಂದಿಯನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ರೈತರ, ಪಶುಪಾಲಕರ ಅಭಿವೃದ್ಧಿಗಾಗಿ ಇಲಾಖೆಯಿಂದ ಪ್ರಾಣಿ ಕಲ್ಯಾಣ ಮಂಡಳಿ, ಪಶುಸಂಜೀವಿನಿ, ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಹಾಗೂ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಪ್ರಾಣಿ ಕಲ್ಯಾಣ ಸಹಾಯವಾಣಿಯಂತಹ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೇರೆ ಕಡೆ ನಿಯೋಜನೆಯ ಮೇಲೆ ಹೋಗಿರುವುದರಿಂದ ಸಿಬ್ಬಂದಿ ಕೊರತೆಯುಂಟಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ರೈತರ ಕರೆಗಳನ್ನು ನಿರ್ವಹಿಸುವುದು ಸವಾಲಾಗಿದೆ. ಅಲ್ಲದೆ, ಲಸಿಕಾ ಕ್ರಾರ್ಯಕ್ರಮಗಳ ಪ್ರಗತಿ ಸಹ ಇದರಿಂದ ಕುಠಿತವಾಗುವ ಸಾದ್ಯತೆ ಇದೆ. ಆದ್ದರಿಂದ ಅನ್ಯ ಕರ್ತವ್ಯದ ಮೇಲೆ ತೆರಳಿದ ಎಲ್ಲಾ ಸಿಬ್ಬಂದಿ ಇದೇ ತಿಂಗಳ ಕೊನೆಯಲ್ಲಿ ಇಲಾಖೆಗೆ ಹಿಂತಿರುಗಲು ಆದೇಶಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಅರಣ್ಯ ಇಲಾಖೆ, ಪಶುವೈದ್ಯಕೀಯ ಮಹಾವಿದ್ಯಾಲಯಗಳು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಅಧೀನದಲ್ಲಿನ ನಿಗಮ/ಮಂಡಳಿಗಳಲ್ಲಿ ಗುರುತುಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಇಲಾಖೆಯ ವಿವಿಧ ವೃಂದದ ಪಶುವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದ ಎಲ್ಲರ ಸೇವೆಯನ್ನು ಹಿಂಪಡೆಯಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಶಾಸಕರಲ್ಲಿ ಮನವಿ: ನಮ್ಮ ಇಲಾಖೆಯಿಂದ ಬೇರೆ ಇಲಾಖೆಗೆ ತೆರಳಿ ಪಶುವೈದ್ಯರು ಕಾರ್ಯ ನಿರ್ವಹಿಸಬಹುದು. ಆದರೆ, ಬೇರೆ ಇಲಾಖೆಯಿಂದ ನಮ್ಮ ಇಲಾಖೆಗೆ ಬಂದು ಅಧಿಕಾರಿಗಳು ಪ್ರಾಣಿಗಳಿಗೆ ಚಿಕಿತ್ಸೆ ನೀಡವಂತಹ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಹೀಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಲಾಖೆಯಿಂದ ಅನ್ಯ ಕರ್ತವ್ಯದ ಮೇಲೆ ಸಿಬ್ಬಂದಿ ನಿಯೋಜನೆ ಮಾಡುವಂತೆ ಮನವಿ ಸಲ್ಲಿಸಬಾರದು ಎಂದು ಮನವಿ ಮಾಡಿದ್ದಾರೆ.

ಪಶುವೈದ್ಯರಿಗೆ ಕಿವಿ ಮಾತು: ನಿಮ್ಮ ಮಾತೃ ಇಲಾಖೆಗೆ ನಿಮ್ಮ ಸೇವೆ ಮುಡಿಪಾಗಿರಲಿ. ಪ್ರಾಣಿಗಳ ರೋದನೆ ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗೆ ಅರ್ಥವಾಗುವುದು ಕಷ್ಟ. ಆದ್ದರಿಂದ ಎಲ್ಲ ಪಶುವೈದ್ಯಾಧಿಕಾರಿಗಳು ಇಲಾಖೆಗೆ ಹಿಂತಿರುಗಿ ಪ್ರಾಣಿಗಳ ಆರೋಗ್ಯಕ್ಕೆ ನಿಮ್ಮ ಸೇವೆಯನ್ನು ಮೀಸಲಿಡಬೇಕು. ನನ್ನ ಇಲಾಖೆಯನ್ನು ನಾನು ನನ್ನ ಕುಟುಂಬವೆಂದು ಪರಿಗಣಿಸಿದ್ದೇನೆ. ಏನೇ ಸಮಸ್ಯೆ ಇದ್ದರೂ ನೇರವಾಗಿ ಸಂಪರ್ಕಿಸಿ ಎಂದು ಸಚಿವರು ಕರೆ ನೀಡಿದ್ದಾರೆ.

ABOUT THE AUTHOR

...view details