ಕರ್ನಾಟಕ

karnataka

ETV Bharat / city

ಯಾವುದೇ ಕಾರಣಕ್ಕೂ ಶಾಲಾ ತರಗತಿಗಳನ್ನು ಆರಂಭಿಸಬಾರದು: ಆಮ್​​ಆದ್ಮಿ ಆಗ್ರಹ

ಶಾಲಾ ಮಕ್ಕಳಿಗೆ ಸೂಕ್ತ ವೈಜ್ಞಾನಿಕ ಪರಿಕರಗಳನ್ನು ನೀಡದೇ, ತಾಂತ್ರಿಕತೆ ಅಳವಡಿಸಿ ಕೊಳ್ಳಲು ಸಹಾಯ ನೀಡದೆ, ಸರ್ಕಾರ ತನ್ನ ಬೇಜವಾಬ್ದಾರಿ ತನವನ್ನು ತೋರಿಸಿ ಇಂದು ಈ ರೀತಿಯ ಶೈಕ್ಷಣಿಕ ಬಿಕ್ಕಟ್ಟು ತಲೆದೋರಲು ನೇರ ಹೊಣೆಯಾಗಿದೆ ಎಂದು ಮೋಹನ್ ದಾಸರಿ ದೂರಿದರು.

Aam Aadmi party demand
ಆಮ್​​ಆದ್ಮಿ ಆಗ್ರಹ

By

Published : Jun 23, 2021, 5:28 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಮೂರನೇ ಅಲೆ ವ್ಯಾಪಕವಾಗಿ ಹರಡುವ ಭೀತಿ ಇದೆ. 18 ವರ್ಷದ ಒಳಗಿನ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಆತಂಕ ಸರ್ಕಾರಕ್ಕೆ ಗೊತ್ತಿದ್ದರೂ ಶಾಲಾ ತರಗತಿಗಳನ್ನು ಪ್ರಾರಂಭ ಮಾಡುವ ಇಂಗಿತವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿರುವುದು ಅತ್ಯಂತ ದುರದೃಷ್ಟಕರ.

ದೇಶದ ಭವಿಷ್ಯದ ಬೆನ್ನೆಲುಬು, ಆಧಾರಸ್ತಂಭ ಹಾಗೂ ಆಸ್ತಿಗಳಾಗಿರುವ ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಈ ಕೂಡಲೇ ತರಗತಿಗಳನ್ನು ಪ್ರಾರಂಭಿಸುವ ನಿಮ್ಮ ಮೂರ್ಖತನವನ್ನು ತಕ್ಷಣವೇ ಕೈಬಿಡಬೇಕೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಸರ್ಕಾರವನ್ನು ಎಚ್ಚರಿಸಿದರು.

ಓದಿ: 46 ಕೋಟಿ ಜನಧನ್ ಖಾತೆ ಮಾಡಿಸಿದ್ದು ಮೋದಿ ಸರ್ಕಾರದ ಸಾಧನೆ; ಪ್ರಹ್ಲಾದ ಜೋಶಿ

ರಾಜ್ಯದಲ್ಲಿ ಅತ್ಯಂತ ಗೊಂದಲಗಳ ಗೂಡಾಗಿರುವ ಶಾಲಾ ಶುಲ್ಕಗಳ ವಿಚಾರವನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಮಹತ್ವದ ಯಾವುದೇ ದಿಟ್ಟ ನಿರ್ಧಾರವನ್ನು ಇದುವರೆಗೂ ತೆಗೆದುಕೊಂಡಿಲ್ಲ. ಕಳೆದ ಬಾರಿ ಶೇ70ರಷ್ಟು ಕಲಿಕಾ ಶುಲ್ಕ ಮಾತ್ರ ಕಟ್ಟಬೇಕೆಂಬ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಅನಗತ್ಯವಾಗಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿಕೊಂಡು ಸರ್ಕಾರದ ಹೆಗಲ ಮೇಲಿದ್ದ ನೈತಿಕ ಜವಾಬ್ದಾರಿಯನ್ನು ಇಳಿಸಿಕೊಂಡಿದ್ದಾರೆ.

ಸರ್ಕಾರದ ಅಂಕಿ - ಅಂಶಗಳ ಪ್ರಕಾರವೇ ಈಗಾಗಲೇ ರಾಜ್ಯದಲ್ಲಿ 2,38,252 ಕ್ಕೂ ಹೆಚ್ಚು 18 ವರ್ಷದ ಒಳಗಿನ ಮಕ್ಕಳಿಗೆ ಕೊರೊನಾ ಸೋಂಕು ತಗಲಿದೆ. ಇವರಲ್ಲಿ 117 ಮಕ್ಕಳು ಈಗಾಗಲೇ ಸಾವನ್ನಪ್ಪಿದ್ದಾರೆ. ಆದರೆ, ವಾಸ್ತವದಲ್ಲಿ ಇನ್ನೂ ಹೆಚ್ಚು ಸಾವು ನೋವುಗಳಾಗಿರುವ ಸಾಧ್ಯತೆಯಿದೆ. 18 ವರ್ಷದ ಒಳಗಿನ ಮಕ್ಕಳಿಗೆ ಸರ್ಕಾರವು ಇದುವರೆಗೂ ಯಾವುದೇ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಪ್ರಕಟಿಸಿಲ್ಲ. ರಾಜ್ಯದ 4.5 ಲಕ್ಷ ದಷ್ಟು ಪೌಷ್ಠಿಕಾಂಶದ ಕೊರತೆ ಹೊಂದಿರುವ ಮಕ್ಕಳು ಇದ್ದಾರೆ ಎಂದರು.

ತಜ್ಞರ ಸಮಿತಿ ನೀಡಿರುವ ವರದಿಯ ಪ್ರಕಾರ ಆನ್​​ಲೈನ್ ತರಗತಿಗಳು ಸಂಪೂರ್ಣ ವೈಫಲ್ಯವಾಗಿದ್ದು, ಶೈಕ್ಷಣಿಕ ಕಂದರ ಉಂಟು ಮಾಡಿದೆ ಎಂದು ತಿಳಿಸಿದೆ. ಇದರ ನೇರ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕಾಗಿದೆ. ಶಾಲಾ ಮಕ್ಕಳಿಗೆ ಸೂಕ್ತ ವೈಜ್ಞಾನಿಕ ಪರಿಕರಗಳನ್ನು ನೀಡದೆ, ತಾಂತ್ರಿಕತೆಯನ್ನು ಅಳವಡಿಸಿ ಕೊಳ್ಳಲು ಸಹಾಯ ನೀಡದೆ ಸರ್ಕಾರವು ತನ್ನ ಬೇಜವಾಬ್ದಾರಿ ತನವನ್ನು ತೋರಿಸಿ ಇಂದು ಈ ರೀತಿಯ ಶೈಕ್ಷಣಿಕ ಬಿಕ್ಕಟ್ಟು ತಲೆದೋರಲು ನೇರ ಹೊಣೆಯಾಗಿದೆ ಎಂದು ದೂರಿದರು.

ಈ ನಡುವೆ ಎಸ್​​ಎಸ್​​ಎಲ್​​ಸಿ ಪರೀಕ್ಷೆಯನ್ನು ಸಹ ನಡೆಸೇ ತೀರುತ್ತೇವೆ ಎಂಬ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಮಕ್ಕಳಲ್ಲಿ ನಿರ್ಲಜ್ಜ ಧೋರಣೆಯಿಂದಾಗಿ ರೋಗಗಳು ವ್ಯಾಪಕವಾಗಿ ಹರಡುವ ಭೀತಿ ಉಂಟಾಗಿದೆ. ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪಾಲ್ ರವರು ಸಹ ಶಾಲೆಗಳು ಆರಂಭವಾದರೆ ಕೊರೋನ ಹರಡುವ ಭೀತಿ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ.ದೇವಿಶೆಟ್ಟಿ ರವರ ನೇತೃತ್ವದ ತಜ್ಞರ ಸಮಿತಿಯು ನೀಡಿರುವ ವರದಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಸರ್ಕಾರವು ಆತುರಾತುರದಲ್ಲಿ ತರಗತಿಗಳನ್ನು ಪ್ರಾರಂಭ ಮಾಡುತ್ತೇವೆಂದು ಹೇಳುತ್ತಿರುವುದು ಎಲ್ಲೋ ಒಂದು ಕಡೆ ಸರ್ಕಾರವು ಖಾಸಗಿಯವರೊಂದಿಗೆ ಕೈಜೋಡಿಸಿದೆ. ಅಷ್ಟೇ ಅಲ್ಲ ಡೊನೇಷನ್ ದಂಧೆಗೆ ಇಂಬು ನೀಡುತ್ತಿದೆ ಎಂದು ಮೋಹನ್ ದಾಸರಿ ಅನುಮಾನ ವ್ಯಕ್ತಪಡಿಸಿದರು.

ABOUT THE AUTHOR

...view details