ಕರ್ನಾಟಕ

karnataka

ಪಿಎಸ್​ಐ ನೇಮಕಾತಿ ಅಕ್ರಮ ಹಿನ್ನೆಲೆ, ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Apr 29, 2022, 12:52 PM IST

Updated : Apr 29, 2022, 2:56 PM IST

ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ಭಾರಿ ಪಾರದರ್ಶಕವಾಗಿ ಪರೀಕ್ಷೆ ನಡೆಯಲಿದೆ. ಎಷ್ಟು ಸೆಂಟರ್​ಗಳಲ್ಲಿ ಪರೀಕ್ಷೆ ನಡೆಸಬೇಕು? ಇಲಾಖೆಯೇ ನಡೆಸಬೇಕಾ? ಬೇರೆಯವರಿಗೆ ಕೊಡಬೇಕಾ? ಈ ಬಗ್ಗೆ ನಾವು ಚರ್ಚೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

psi-scam-re-exam-for-aspirants
ಪಿಎಸ್​ಐ ಅಕ್ರಮ ಹಿನ್ನೆಲೆ, ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು : ಪಿಎಸ್​​ಐ ಪರೀಕ್ಷೆಯಲ್ಲಿ 545 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ, ನೇಮಕಾತಿಯಲ್ಲಿ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ವಿಕಾಸಸೌಧದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಂದಕ್ಕಿಂತ ಹೆಚ್ಚು ಸೆಂಟರ್​​ನಲ್ಲಿ ಅವ್ಯವಹಾರ ಮನದಟ್ಟಾಗಿದೆ. ಹಾಗಾಗಿ, ಇಡೀ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಹೊಸದಾಗಿ ಪರೀಕ್ಷೆ ನಡೆಯಲಿದೆ. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅಪಾಧಿತರನ್ನು ಹೊರತುಪಡಿಸಿ, ಎಲ್ಲರಿಗೂ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಶೀಘ್ರದಲ್ಲೇ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಕಟ್ಟು ನಿಟ್ಟಿನ ಪರೀಕ್ಷೆ ಗೆ ಮತ್ತಷ್ಟು ನಿಯಮಾವಳಿ : ಹಣಕ್ಕಾಗಿ ಹುದ್ದೆಗಳು ಎನ್ನುವುದನ್ನು ಬಿಡಬೇಕು. ಅನೇಕ ಪರೀಕ್ಷೆಗಳಲ್ಲಿ ಇಂತಹದ್ದು ಆಗಿದೆ. ಇನ್ನಷ್ಟು ಕಠಿಣ ನಿಯಮ ತರಬೇಕಿದೆ. ಕಠಿಣ ಪರಿಶ್ರಮ ಹಾಕಿದವರು ಅವಕಾಶ ವಂಚಿತರಾಗುತ್ತಿದ್ದಾರೆ. ಹಣ ಹಾಗೂ ಅಕ್ರಮ ಎಸಗುವವರು ಸೆಲೆಕ್ಟ್ ಆಗುತ್ತಿದ್ದಾರೆ. ಇದಕ್ಕೆ‌ ಬ್ರೇಕ್ ಹಾಕಲು ಕಠಿಣ ನಿಯಮ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವರು ಹೇಳಿದರು.

ಈ ಭಾರಿ ಪಾರದರ್ಶಕವಾಗಿ ಪರೀಕ್ಷೆ ನಡೆಯಲಿದೆ. ಎಷ್ಟು ಸೆಂಟರ್​ಗಳಲ್ಲಿ ಪರೀಕ್ಷೆ ನಡೆಸಬೇಕು? ಇಲಾಖೆಯೇ ನಡೆಸಬೇಕಾ? ಬೇರೆಯವರಿಗೆ ಕೊಡಬೇಕಾ? ಈ ಬಗ್ಗೆ ನಾವು ಚರ್ಚೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ಅರ್ಚನಾ ದಿವ್ಯಾ, ಚಾಲಕ ಸದ್ದಾಂ, ಸುನಂದಾ ಅವರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಅವರನ್ನು ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ತಿಳಿಸಿದರು.

ಹೊಸ ಟೆಕ್ನಾಲಜಿಯಿಂದ ಅಕ್ರಮ ಎಸಗಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಲಿದೆ. ಇದನ್ನು ಹೇಗೆ ನಿರ್ಬಂಧಿಸಬಹುದು ಎಂಬುದರ ಬಗ್ಗೆ ನೋಡುತ್ತಿದ್ದೇವೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮವಾಗಲಿದೆ. ಇದರಲ್ಲಿ ಅಧಿಕಾರಿಗಳು ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಪಿಎಸ್​ಐ ಅಕ್ರಮದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಪ್ರಾಧ್ಯಾಪರ ನೇಮಕಾತಿಯಲ್ಲೂ ಅಕ್ರಮ ಆರೋಪವಿದೆ. ಅಲ್ಲಿಯೂ ಇಲಾಖಾ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಇದೇ ವೇಳೆ ಹೇಳಿದರು.

ಜಮೀರ್ ಅಹ್ಮದ್ ಕಿಟ್ ವಿತರಣೆಗೆ ಕಿಡಿ: ಹುಬ್ಬಳ್ಳಿ ಗಲಭೆ ಆಪಾದಿತರಿಗೆ ಶಾಸಕ ಜಮೀರ್ ಅಹ್ಮದ್ ಕಿಟ್ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಜಮೀರ್ ಅವರು ಈ ಘಟನೆಯನ್ನು ಖಂಡಿಸಬೇಕಿತ್ತು. ಅದರ ಬದಲಿಗೆ ಆಹಾರ ಕಿಟ್ ವಿತರಿಸಿ ಹೀರೋ ಆಗಲು ಹೊರಟಿದ್ದಾರೆ. ಸಮಾಜ ದ್ರೋಹಿ ಶಕ್ತಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬಾರದು. ಶಾಸಕರೇ ಈ ರೀತಿ ನಡೆದುಕೊಂಡರೆ ಅದು ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ. ಕಾಂಗ್ರೆಸ್ ಪಕ್ಷ ಮತ್ತು ಜನತೆ ಈ ಬಗ್ಗೆ ಯೋಚನೆ ಮಾಡಬೇಕು ಎಂದು ಟಾಂಗ್ ನೀಡಿದರು.

Last Updated : Apr 29, 2022, 2:56 PM IST

ABOUT THE AUTHOR

...view details