ಬೆಂಗಳೂರು:ಇನ್ನುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ವಹಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ರಾಜ್ಯಸಭೆ ಸದಸ್ಯ ಹಾಗೂ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾಕರ್ ಕೋರೆ ತಿಳಿಸಿದರು.
ಬಿಜೆಪಿ ಕಚೇರಿಗೆ ಪ್ರಭಾಕರ ಕೋರೆ ಭೇಟಿ ನೀಡಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಕೆಲಕಾಲ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಕ್ಷ ಎರಡು ಅವಕಾಶ ನೀಡಿದೆ. ಯಾವುದೇ ಅಸಮಾಧಾನವಿಲ್ಲ. ಇದು ಪಕ್ಷದ ವರಿಷ್ಠರ ನಿರ್ಧಾರ, ನಾವು ಏನೂ ಹೇಳಲಾಗದು ಎಂದರು.
ಕಾಂಗ್ರೆಸ್ನಿಂದ ಬಂದ ನನ್ನನ್ನು ಎರಡು ಬಾರಿ ರಾಜ್ಯಸಭೆಗೆ ಕಳುಹಿಸಿಕೊಟ್ಟರು. ಪಕ್ಷದ ರಾಜ್ಯ ಉಪಾಧ್ಯಕ್ಷನನ್ನಾಗಿ ಮಾಡಿದ್ದರು. ಈ ಬಾರಿ ಕಾರ್ಯಕರ್ತರಿಗೆ ಕೊಡುತ್ತೇವೆ ಎಂದಿದ್ದರು, ಅದರಂತೆ ನಡೆದುಕೊಂಡಿದ್ದಾರೆ. ಪಕ್ಷ ಸಂಘಟನೆಯ ಭಾಗವಾಗಿ ಕೊಟ್ಟಿದ್ದಾರೆ. ಇದು ಸಂತೋಷದ ವಿಚಾರ.
ಎರಡು ಸಲ ರಾಜ್ಯಸಭೆ ಸದಸ್ಯನಾಗಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷದಲ್ಲಿ ರಮೇಶ್ ಕತ್ತಿ ಸೇರಿ ಸಾಕಷ್ಟು ಆಕಾಂಕ್ಷಿಗಳಿದ್ದರು. ರಾಜಕೀಯ ಪಕ್ಷ ಅಂದ ಮೇಲೆ ಆಕಾಂಕ್ಷಿಗಳು ಸಹಜ ಎಂದರು.
ರಾಜ್ಯಸಭ ಸದಸ್ಯ ಪ್ರಭಾಕರ್ ಕೋರೆ ನಾಮಪತ್ರ ಸಲ್ಲಿಸಲು ವಿಧಾನಸೌಧಕ್ಕೆ ಬಂದ ಬಿಜೆಪಿ ಅಭ್ಯರ್ಥಿಗಳು:
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಬಿಜೆಪಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ವಿಧಾನಸೌಧಕ್ಕೆ ಆಗಮಿಸಿದರು. ಬೆಳಗಾವಿ ಭಾಗದ ವಿವಿಧ ನಾಯಕರು ಹಾಗೂ ರಾಜ್ಯ ಬಿಜೆಪಿ ನಾಯಕರ ಈ ವೇಳೆ ಜೊತೆಗಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಈರಣ್ಣ ಕಡಾಡಿ, ಉಮೇಶ್, ರಮೇಶ್ ಕತ್ತಿ ಸೇರಿ ಎಲ್ಲಾ ನಾಯಕರು ಒಟ್ಟಾಗಿ ನಾಮಪತ್ರ ಸಲ್ಲಿಸುತ್ತೇವೆ. ಪ್ರಭಾಕರ್ ಕೋರೆ ಕೂಡ ಆಗಮಿಸಿದ್ದಾರೆ ಎಂದರು.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಮ್ಮ ಹೆಸರಿಲ್ಲ ಅನ್ನುವ ಪ್ರಶ್ನೆಗೆ ರಾಜ್ಯ ನಾಯಕರು ಉತ್ತರಿಸುತ್ತಾರೆ. ನಾವು ಒಂದೇ ಕುಟುಂಬದವರು. ಉಮೇಶ್ ಕತ್ತಿ ನಮ್ಮ ನಾಯಕರು. ಬಿಜೆಪಿ ಸಂಘಟನೆ ಆಧಾರಿತ ಪಾರ್ಟಿ. ರಾಷ್ಟ್ರೀಯ ನಾಯಕರು ಚರ್ಚಿಸಿ ನಿರ್ಧರಿಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗದಿರಬಹುದು. ನಾನು ರಾಜಕೀಯಕ್ಕೆ ಹೊಸಬನಲ್ಲ. 30 ವರ್ಷದಿಂದ ನಾನು ರಾಜಕೀಯದಲ್ಲಿದ್ದೇನೆ ಎಂದು ಹೇಳಿದರು.