ಬೆಂಗಳೂರು: ಕಲಬುರ್ಗಿ ಮತ್ತು ಧಾರವಾಡ ವಿಶ್ವವಿದ್ಯಾಲಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳನ್ನು ಕುಲಪತಿಗಳನ್ನಾಗಿ ನೇಮಕ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಠಾಧೀಶರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸಕ್ಕೆ ಭೇಟಿ ಕೊಟ್ಟಿದ್ದ ಮಠಾಧೀಶರ ನಿಯೋಗದೊಂದಿಗೆ ಸಾಲುಮರದ ತಿಮ್ಮಕ್ಕ ಕೂಡ ಹಾಜರಿದ್ದರು. ಕರ್ನಾಟಕ ರಾಜ್ಯ ಮಾನವ ಧರ್ಮಪೀಠ ಸಭಾ ಮೂಲಕ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಸಿದ್ದರಾಮಯ್ಯಗೆ ಮಠಾಧೀಶರ ಮನವಿ ಈ ಎರಡು ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ಸಂದರ್ಭ ಸಾಮಾಜಿಕ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಪತ್ರ ಬರೆಯಬೇಕೆಂದು ಮಠಾಧೀಶರು ಒತ್ತಾಯಿಸಿದರು.
ಈ ಕಾರ್ಯ ತಮ್ಮಿಂದ ಆದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಹಜ ನ್ಯಾಯವನ್ನು ಎತ್ತಿ ಹಿಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ನಿಜವಾದ ಮಾನವತಾವಾದಿ ಆಗಿರುವ ತಾವು ಸರ್ಕಾರದ ಗಮನಕ್ಕೆ ತಂದು ಈ ಕಾರ್ಯ ನೆರವೇರಿಸಿ ಕೊಡಬೇಕು. ರಾಜ್ಯದ 25 ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳನ್ನು ನೇಮಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ತಮ್ಮ ಅವಧಿಯಲ್ಲಿ ಒಟ್ಟು ನಾಲ್ವರು ಕುಲಪತಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿದವರು ಇದ್ದರು.
ಜಾನಪದ ವಿವಿಯಲ್ಲಿ ಲಂಬಾಣಿ ವರ್ಗಕ್ಕೆ ಸೇರಿದ ಪ್ರೊಫೆಸರ್ ಬಿ.ಬಿ. ನಾಯಕ್ ಬಿಟ್ಟರೆ, ಇನ್ಯಾರೂ ಇಲ್ಲ. ಇದರಿಂದಾಗಿ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗಿದೆ. ಸಾಮಾಜಿಕ ನ್ಯಾಯ ಉಲ್ಲಂಘನೆಯಾಗುತ್ತಿದ್ದು ತಾವು ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಕಾರ್ಯ ಸಾಧ್ಯವಾಗಬೇಕು ಎಂದು ಮನವಿ ಮಾಡಿದರು. ಇಂದು ಭೇಟಿ ಕೊಟ್ಟ ನಿಯೋಗದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಶ್ರೀ ಹರಳಯ್ಯ ಮಹಾಸ್ವಾಮಿ ಮತ್ತಿತರರು ಇದ್ದರು.