ಬೆಂಗಳೂರು :ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಘಟನೆ ನಂತರ ರಾಜ್ಯದಲ್ಲಿ ಗಣಿಗಾರಿಕೆ ಸ್ಥಗಿತವಾಗಿದೆ. ಮೇಲಾಗಿ ರಾಜ್ಯದ ಶೇ.90ರಷ್ಟು ಗಣಿಗಳ ಮಾಲೀಕರು ಡಿಜಿಎಂಎಸ್ ಲೈಸೆನ್ಸ್ ಪಡೆದಿಲ್ಲ. ಅವರಿಗೆ 90 ದಿನಗಳೊಳಗಾಗಿ ಡಿಜಿಎಂಎಸ್ ಲೈಸೆನ್ಸ್ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಅವರು, ರಾಜ್ಯದಲ್ಲಿ ಸ್ತಬ್ಧಗೊಂಡಿರುವ ಗಣಿ ಮತ್ತು ಕ್ರಷರ್ ಉದ್ಯಮವನ್ನು ಪುನಾರಂಭಿಸುವ ನಿಟ್ಟಿನಲ್ಲಿ 90 ದಿನದೊಳಗೆ ಗಣಿ ಸುರಕ್ಷತಾ ಮಹಾನಿರ್ದೇಶಕರು ಲೈಸೆನ್ಸ್ ನೀಡಲು ನೂತನ ನಿಯಮ ಜಾರಿ ಮಾಡಲಾಗುವುದು. ಅಲ್ಲಿಯವರಗೆ ಗಣಿಗಾರಿಕೆ ನಡೆಸಲು ಅವರು ಸರ್ಕಾರಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು.
90 ದಿನಗಳೊಳಗಾಗಿ ಡಿಜಿಎಂಎಸ್ ಲೈಸೆನ್ಸ್ ಪಡೆದುಕೊಳ್ಳಲು ಅವಕಾಶ.. ಜೊತೆಗೆ ಐದು ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಎರಡೂವರೆ ಕೆಜಿ ಸ್ಫೋಟಕ ಬಳಸಿ ಗಣಿಗಾರಿಕೆ ಮಾಡುವವರಿಗೆ ಡಿಜಿಎಂಎಸ್ ಲೈಸೆನ್ಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಅವರು ಈಗಾಗಲೇ ಡಿಜಿಎಂಎಸ್ ಲೈಸೆನ್ಸ್ ಪಡೆದಿರುವವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ವಿವರ ನೀಡಿದರು.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದ ಸ್ಫೋಟ ಪ್ರಕರಣಗಳ ಬಳಿಕ ರಾಜ್ಯದಲ್ಲಿ ಗಣಿ ಮತ್ತು ಕ್ರಷರ್ ಉದ್ಯಮ ಸಂಪೂರ್ಣ ಸ್ತಬ್ಧಗೊಂಡಿದೆ. ಈ ಉದ್ಯಮವನ್ನು ಪುನಾರಂಭಿಸಬೇಕಾದರೆ ಸ್ಫೋಟಕಗಳನ್ನು ಬಳಸುವುದು ಅನಿವಾರ್ಯ ಎಂದರು.
ಪ್ರಸ್ತುತ ಇರುವ ನಿಯಮವನ್ನು ಮುಂದುವರೆಸಿದರೆ ಉದ್ಯಮ ನಡೆಸುವುದೇ ಕಷ್ಟಕರ. ಈ ಹಿನ್ನೆಲೆ ಮಾಲೀಕರು ಸ್ಫೋಟಕಗಳನ್ನು ಬಳಸಲು ಅರ್ಜಿ ಸಲ್ಲಿಸಿದರೆ ಗಣಿ ಸುರಕ್ಷತಾ ಮಹಾನಿರ್ದೇಶಕರು 90 ದಿನದೊಳಗೆ ಪರವಾನಿಗೆ ನೀಡುವಂತೆ ನಿಯಮವನ್ನು ಜಾರಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸುಮಾರು 2,500 ಗಣಿ ಮತ್ತು ಕ್ರಷರ್ ಕ್ವಾರಿಗಳಿವೆ. ಇದರಲ್ಲಿ ಶೇ.10ರಷ್ಟು ಮಾತ್ರ ಲೈಸೆನ್ಸ್ ಪಡೆಯಲಾಗಿದೆ. ಉಳಿದ ಶೇ.90ರಷ್ಟು ಲೈಸೆನ್ಸ್ ಪಡೆಯಲು ಸಾಧ್ಯವಾಗಿಲ್ಲ. ಹಾಲಿ ಇರುವ ನಿಯಮದಿಂದ ಉದ್ಯಮ ನಡೆಸಲು ಕಷ್ಟವಾಗುತ್ತದೆ ಎಂದು ಹೇಳಿದರು.
ಗಣಿ ಅದಾಲತ್ :ರಾಜ್ಯದಲ್ಲಿ ವಿಭಾಗಾವಾರು ಗಣಿ ಅದಾಲತ್ ನಡೆಸಲು ನಿರ್ಧರಿಸಲಾಗಿದೆ. ಐದು ವಿಭಾಗಗಳಲ್ಲಿ ಗಣಿ ಅದಾಲತ್ ನಡೆಸಲಾಗುತ್ತಿದೆ. ಏಪ್ರಿಲ್ 17ರಂದು ಬೆಂಗಳೂರು, ಏಪ್ರಿಲ್ 30ರಂದು ಬೆಳಗಾವಿ, ಮೇ 15ರಂದು ಮೈಸೂರು, ಮೇ 29ರಂದು ಕಲಬುರಗಿ ಹಾಗೂ ಜೂನ್ 11ರಂದು ಮಂಗಳೂರಿನಲ್ಲಿ ಗಣಿ ಅದಾಲತ್ ನಡೆಸಲಾಗುತ್ತದೆ.
ಇದರಿಂದ ಗಣಿ ಮಾಲೀಕರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಉದ್ಯಮವು ಕೂಡ ಸುಲಲಿತವಾಗಿ ನಡೆಯಲಿದೆ ಎಂದು ಸಚಿವ ನಿರಾಣಿ ಹೇಳಿದರು. ಗಣಿ ಮಾಲೀಕರು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಗಣಿ ಅದಾಲತ್‍ನಿಂದ ಸಹಾಯವಾಗಲಿದೆ. ನಮ್ಮ ಇಲಾಖೆ ಇಂತಹ ಹೊಸ ಪ್ರಯೋಗ ಮಾಡಿದೆ ಎಂದರು.
ವಾಹನಗಳಿಗೆ ಜಿಪಿಎಸ್ :ಮುಂದಿನ ದಿನಗಳಲ್ಲಿ ಇಲಾಖೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಇದರಿಂದ ವಾಹನಗಳ ಮೇಲೆ ನಿಗಾವಹಿಸಲು ಸಾಧ್ಯವಾಗಲಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದರು.
ಹಿಂದೆ ನಡೆದ ಘಟನೆಗಳಿಂದ ಪಾಠ ಕಲಿತಿದ್ದೇವೆ. ಎರಡೂ ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಸ್ಫೋಟವಾಗಿಲ್ಲ. ಶಿವಮೊಗ್ಗದಲ್ಲಿ ಸ್ಫೋಟಕ ಸಂಗ್ರಹಿಸಿದ್ದ ಸ್ಥಳದಲ್ಲಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸ್ಫೋಟಕವನ್ನು ಬೆಂಕಿಗೆ ಹಾಕಿದ್ದರಿಂದ ಈ ಘಟನೆ ಆಗಿದೆ. ಆದರೂ ಸ್ಫೋಟಕ ಸಂಗ್ರಹ ಸೇರಿ ಎಲ್ಲ ವಿಷಯಗಳ ಬಗ್ಗೆ ಗಣಿ ಮಾಲೀಕರಿಗೆ ಡಿಜಿಎಂಎಸ್ ಮೂಲಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.